ಮಡಿಕೇರಿ, ಮೇ ೭: ತಾ. ೧೨ ರಂದು ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷ ಕೊಡಗು ಜಿಲ್ಲಾ ಘಟಕದ ವತಿಯಿಂದ ರೈತ ಸಮಾವೇಶ ಹಮ್ಮಿಕೊಂಡಿದ್ದು, ಕಂದಾಯ ಸಚಿವ ಆರ್. ಅಶೋಕ್ ಭಾಗವಹಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ರೈತ ಸಮಾವೇಶದಲ್ಲಿ ಮುಖ್ಯವಾಗಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡಿಕೊಂಡಿರುವ ರೈತರಿಗೆ ಜಾಗವನ್ನು ೩೦ ವರ್ಷಕ್ಕೆ ನಿಗದಿತ ದರದಲ್ಲಿ ಗುತ್ತಿಗೆ ನೀಡುವ ಸಂಬAಧ ಚರ್ಚಿಸಲಾಗುತ್ತದೆ. ಜೊತೆಗೆ ಪೌತಿ ಖಾತೆಯಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದು ರೈತರಿಂದ ಸಲಹೆ ಪಡೆದು ಸಭೆಯಲ್ಲಿ ವ್ಯಕ್ತವಾದ ವಿಷಯದ ಆಧಾರದಲ್ಲಿ ಮಧ್ಯಾಹ್ನ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.
ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಸಚಿವರನ್ನು ಕರೆಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಿತರ ಸಚಿವರನ್ನು ಕರೆಸಿ ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿ ಯೋಜನೆ ರೂಪಿಸಿದೆ. ರೈತ ಸಮಾವೇಶಕ್ಕೆ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ೧೨ ಸಾವಿರ ಎಕರೆ ಪೈಸಾರಿ ಜಾಗ ಒತ್ತುವರಿಯಾಗಿ ಕಾಫಿ ತೋಟಗಳಾಗಿ ಮಾರ್ಪಟ್ಟಿವೆೆ. ಭೂ ಒತ್ತುವರಿಯನ್ನು ಗುರುತಿಸಿ ಗುತ್ತಿಗೆ ನೀಡಿ ನಿಗದಿತ ಹಣವನ್ನು ಪಡೆದುಕೊಳ್ಳಲಾಗುತ್ತದೆ. ಇದರಿಂದ ಶೇ ೮೦ ಸಣ್ಣ ಹಿಡುವಳಿ ದಾರರಿಗೆ
(ಮೊದಲ ಪುಟದಿಂದ) ಪ್ರಯೋಜನವಾಗಲಿದೆ ಎಂದ ಅವರು, ಈ ಭೂಮಿಯನ್ನು ಭೂ ರಹಿತರಿಗೆ ನೀಡುವಂತೆ ಜಿಲ್ಲೆಯಲ್ಲಿ ಪ್ರಶ್ನೆ ಎದ್ದಿದೆ. ಈ ಸಂಬAಧ ಈಗಾಗಲೇ ಅರಣ್ಯ ಇಲಾಖೆಗೆ ಸೇರಿದ ೯ ಲಕ್ಷ ಹೆಕ್ಟೇರ್ ಜಾಗದಲ್ಲಿ ೬ ಲಕ್ಷ ಹೆಕ್ಟೇರ್ ಜಾಗವನ್ನು ಕಂದಾಯ ಇಲಾಖೆ ಖರೀದಿಸಲಿದ್ದು, ಇದರಿಂದ ಭೂರಹಿತರಿಗೆ ಹಂಚಿಕೆ ಮಾಡಲಾಗುವುದು. ಕಂದಾಯ ಸ್ಪಂದನ ಕಾರ್ಯಕ್ರಮದ ಮೂಲಕ ೩೦ ಸಾವಿರ ಕಡತಗಳು ವಿಲೇವಾರಿಯಾಗಿವೆ ಎಂದ ಅವರು, ಕಂದಾಯ ಸಚಿವರ ಆಗಮನದಿಂದ ಹಲವು ಸಮಸ್ಯೆಗಳು ಪರಿಹಾರವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಮಾತನಾಡಿ, ಪೌತಿ ಖಾತೆ ಸರಳೀಕರಣಕ್ಕೆ ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ರೈತ ಸಮಾವೇಶಕ್ಕೆ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡು ತಮ್ಮ ಸಮಸ್ಯೆಗಳಿಗೆ, ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.
ಮದೆ ಗ್ರಾ.ಪಂ. ಸದಸ್ಯೆಯೋರ್ವರು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬAಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಬಿನ್ ದೇವಯ್ಯ, ಈಗಾಗಲೇ ಈ ವಿಚಾರ ಗಮನಕ್ಕೆ ಬಂದಿದೆ. ಸತ್ಯಾಂಶ ಸಾಬೀತಾದ ಮೇಲೆ ಸೂಕ್ತ ಕ್ರಮವಹಿಸಲಾಗುವುದು. ಕೊಡಗು ಜಿಲ್ಲೆಯ ಶಾಸಕರಿಗೆ ಈ ಬಾರಿ ಸಚಿವ ಸ್ಥಾನ ನಿರೀಕ್ಷೆ ಇದೆ. ಕೊಡಗಿನ ಶಾಸಕರುಗಳಿಗೆ ಸಚಿವ ಸ್ಥಾನ ನೀಡಬೇಕೆಂಬ ಇಂಗಿತ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಹಾಜರಿದ್ದರು.