ಮಡಿಕೇರಿ, ಮೇ ೬: ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ೨೬ನೇ ವಾರ್ಷಿಕ ಮಹೋತ್ಸವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ತಾ. ೧ರಂದು ಸಂಘದ ನಿವೇಶನದಲ್ಲಿ ನಡೆಯಿತು. ಸಂಘದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಮಾರಾಠ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎA. ಪರಮೇಶ್ವರ ಅವರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಹಿತ ಸಂರಕ್ಷಣಾ ಸಮಿತಿಯ ಸಂಚಾಲಕ ಶ್ರೀಧರ್ ನಾಯಕ್ ಮುಂಡೂವು ನಡೆಸಿದರು. ಅತಿಥಿಗಳಾಗಿ ಉದ್ಯಮಿಗಳಾದ ಗೋಪಿಕೃಷ್ಣ ಎಂ.ಟಿ ಬದಿಯಡ್ಕ, ಪಾರ್ವತಿ ಗಣೇಶ, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ ನರಸಿಂಹ, ಕಟ್ಟಡ ಸಮಿತಿ ಅಧ್ಯಕ್ಷ ಗುರುವಪ್ಪ, ಯುವ ವೇದಿಕೆ ಅಧ್ಯಕ್ಷ ಎಂ.ಟಿ. ಮೋಹನ್, ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಹಿತ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ್ ಕೆದಿಲಯ ಭಾಗವಹಿಸಿದ್ದರು.
ಸಭಾ ಉದ್ಘಾಟನೆ ಬಳಿಕ, ರೇಖಾ ಸಂಪತ್ ಸ್ವಾಗತಿಸಿದರು. ೨೦೨೧-೨೨ರ ಸಾಲಿನಲ್ಲಿ ಮೃತಪಟ್ಟ ಮರಾಟಿ ಸಮಾಜ ಬಾಂಧವರಿಗೆ ಸಂತಾಪ ಸೂಚಿಸಲಾಯಿತು, ಬಳಿಕ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ಸಭೆಯಿಂದ ಅನುಮೋದನೆಗೊಂಡ ಬಳಿಕ, ಮಹಿಳಾ ವೇದಿಕೆ ಅಧ್ಯಕ್ಷೆ ವರದಿಯನ್ನು ಮಂಡಿಸಿದರು, ಬಳಿಕ ೨೦೨೨-೨೩ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಮುಖ್ಯ ಅತಿಥಿಗಳ ಭಾಷಣ ಹಾಗೂ ಅಧ್ಯಕ್ಷರ ಭಾಷಣ ನೆರವೇರಿತು.ಸಭೆಯಲ್ಲಿ ತಿತಿಮತಿಯ ಬಾಲಕೃಷ್ಣ ನಾಯ್ಕ್, ಮಕ್ಕಂದೂರಿನ ಹರಿಣಾಕ್ಷಿ, ಮಕ್ಕಂದೂರಿನ ಹೇಮಾವತಿ, ಅವರೆಗುಂದದ ರಮೇಶ್ ಎಂ.ವಿ. ಇವರುಗಳು ಅಜೀವ ಸದಸ್ಯತ್ವವನ್ನು ಪಡೆದುಕೊಂಡರು. ೨ನೇ ಮೊಣ್ಣಂಗೇರಿ ಹೂವಮ್ಮ ಹಾಗೂ ವೆಂಕಪ್ಪ ಎಂ.ಎಸ್., ಪುತ್ತೂರಿನ ಶ್ರೀಧರ್ ನಾಯ್ಕ್ ಮಹಾಸಭೆ ಖರ್ಚಿಗೆ ದೇಣಿಗೆ ನೀಡಿದರು.