ಸೋಮವಾರಪೇಟೆ, ಮೇ ೪: ಸಮೀಪದ ಕಿರಗಂದೂರು ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಪ್ರಯುಕ್ತ ಹಳೆಯ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆ ನಡೆಯಿತು.

ಶಾಲಾ ಆವರಣದಲ್ಲಿ ನಡೆದ ಕ್ರೀಡಾ ಸ್ಪರ್ಧೆಗೆ ನಿವೃತ್ತ ಸಿಟಿಒ ಬಿಳಿಗೇರಿ ಗ್ರಾಮದ ಬಿ.ಎ. ನಾಣಿಯಪ್ಪ ಚಾಲನೆ ನೀಡಿದರು. ನಂತರ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಜಿ.ಸಿ. ಬಿದ್ದಪ್ಪ ವಹಿಸಿದ್ದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕಿರಗಂದೂರು ಗ್ರಾಮದ ಯಶೋಧ, ಸಂಘದ ಉಪಾಧ್ಯಕ್ಷ ಗೌತಮ್ ಕಿರಗಂದೂರು, ಕಾರ್ಯದರ್ಶಿ ಪಿ.ಬಿ. ಪೊನ್ನಪ್ಪ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಧನುಶ್ಯ ಪ್ರಥಮ, ಅಭಿಷೇಕ್ ದ್ವಿತೀಯ, ಕಾರ್ತಿಕ್ ತೃತೀಯ ಹಾಗೂ ದೀಕ್ಷಿತ್, ಆಕಾಶ್ ಸಮಾಧಾನಕರ ಬಹುಮಾನ ಪಡೆದರು. ೧೪ರ ವಯೋಮಾನದೊಳಗಿನ ಸ್ಪರ್ಧೆಯಲ್ಲಿ ಅಂಜನ್ ಗೌಡ ಪ್ರಥಮ, ಪ್ರತೀಶ್ ದ್ವಿತೀಯ ಹಾಗೂ ಮೋಕ್ಷಿತ್ ತೃತೀಯ ಸ್ಥಾನಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ನಡೆದ ಥ್ರೋಬಾಲ್ ಸ್ಪರ್ಧೆಯಲ್ಲಿ ಉಮಾಮಹೇಶ್ವರಿ ಗುಬ್ಬನಮನೆ ತಂಡ ಪ್ರಥಮ ಮತ್ತು ಮಲ್ಲಾಜಿರಾ ತಾಕೇರಿ ತಂಡ ದ್ವಿತೀಯ ಸ್ಥಾನ ಪಡೆದವು. ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ ತಾಕೇರಿ ಬಿ ಪ್ರಥಮ ಹಾಗೂ ತಾಕೇರಿ ಸಿ. ದ್ವಿತೀಯ ಸ್ಥಾನಗಳಿಸಿತು.

ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಕೀರ್ತಿ ಪೊನ್ನಪ್ಪ ಪ್ರಥಮ, ಪ್ರವೀಣ್ ಕಿರಗಂದೂರು ದ್ವಿತೀಯ ಹಾಗೂ ಕೆ.ಟಿ. ಮಧು ತೃತೀಯ ಸ್ಥಾನಗಳಿಸಿದರು. ಹಗ್ಗಜಗ್ಗಾಟದಲ್ಲಿ ಟೀಮ್ ತಾಕೇರಿ ಪ್ರಥಮ ಹಾಗೂ ಪಿಚ್ ಸ್ಮಾರ‍್ಸ್ ದ್ವಿತೀಯ ಸ್ಥಾನಗಳಿಸಿದವು. ಮಹಿಳೆಯರ ವಿಭಾಗದಲ್ಲಿ ತಾಕೇರಿ ೧ ಪ್ರಥಮ ಹಾಗೂ ಉಮಾಮಹೇಶ್ವರಿ ಗುಬ್ಬನಮನೆ ದ್ವಿತೀಯ ಸ್ಥಾನಗಳಿಸಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.