ರೆಪೋ ದರ ಏರಿಕೆ ಎಫೆಕ್ಟ್: ಸೆನ್ಸೆಕ್ಸ್ ೧೩೦೦ ಅಂಕ ಕುಸಿತ

ಮುಂಬೈ, ಮೇ ೪: ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. ೪.೪೦ಕ್ಕೆ ಹೆಚ್ಚಿಸಿದ್ದು, ಆರ್‌ಬಿಐನ ಈ ಅಚ್ಚರಿ ನಡೆಗೆ ಭಾರತೀಯ ಷೇರುಮಾರುಕಟ್ಟೆ ಆಘಾತಕ್ಕೊಳಗಾಗಿದೆ. ರೆಪೋದರ ಏರಿಕೆ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಕುಸಿದಿದ್ದು, ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ ಬರೊಬ್ಬರಿ ಶೇ. ೨.೨೯ರಷ್ಟು ಅಂದರೆ ೧,೩೦೬.೯೬ ಅಂಕಗಳ ಕುಸಿತಗೊಂಡು ೫೫,೬೬೯.೦೩ ಅಂಕಗಳಿಗೆ ತಲುಪಿದೆ. ಇದು ಈ ವಾರದ ವಹಿವಾಟಿನ ಸತತ ಮೂರನೇ ನಕಾರಾತ್ಮಕ ವಹಿವಾಟಾಗಿದೆ. ಇದೇ ರೀತಿ ಎನ್‌ಎಸ್‌ಇ ನಿಫ್ಟಿ ಕೂಡ ೨.೨೯ ರಷ್ಟು ಅಂದರೆ ೩೯೧.೫೦ ಅಂಕಗಳ ಕಳೆದುಕೊಂಡಿದ್ದು, ೧೬,೬೭೭.೬೦ ಅಂಕಗಳಿಗೆ ಕುಸಿದಿದೆ. ಮಾರುಕಟ್ಟೆ ದಿಢೀರ್ ಕುಸಿತಕ್ಕೆ ಹೂಡಿಕೆದಾರರ ಅತಂಕ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದು, ಅಮೇರಿಕಾ ಫೆಡರಲ್ ಬ್ಯಾಂಕ್ ಕೂಡ ಆರ್‌ಬಿಐನಂತೆಯೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ. ಇದೇ ಕಾರಣಕ್ಕೆ ಹೂಡಿಕೆದಾರರು ಏಕಾಏಕಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದು ಮಾರುಕಟ್ಟೆಯ ಹಾಲಿ ಪರಿಸ್ಥಿತಿಗೆ ಕಾರಣ ಎಂದು ಹೇಳಲಾಗಿದೆ. ಇಂದಿನ ವಹಿವಾಟಿನಲ್ಲಿ ಎಲ್ಲಾ ಬಿಎಸ್‌ಇ-ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳದ ಪೈಕಿ ರೂ. ೬.೨೭ ಲಕ್ಷ ಕೋಟಿಗಳಷ್ಟು ನಷ್ಟವಾಗಿ ಬಂಡವಾಳ ಪ್ರಮಾಣ ರೂ. ೨,೫೯,೬೦,೮೫೨.೪೪ ಕೋಟಿಗೆ ಕುಸಿದಿದೆ. ಸೆನ್ಸೆಕ್ಸ್ನಲ್ಲಿ ಬಜಾಜ್ ಫೈನಾನ್ಸ್ ಅತಿ ಹೆಚ್ಚು ನಷ್ಟ ಅನುಭವಿಸಿದ್ದು, ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ. ೪.೨೯ ರಷ್ಟು ಕುಸಿದಿದೆ. ನಂತರದ ಸ್ಥಾನದಲ್ಲಿ ಬಜಾಜ್ ಫಿನ್‌ಸರ್ವ್, ಟೈಟಾನ್, ಇಂಡಸ್‌ಇAಡ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಮತ್ತು ಆರ್‌ಐಎಲ್ ಕಂಪೆನಿಗಳು ನಷ್ಟ ಅನುಭವಿಸಿದ ಪಟ್ಟಿಯಲ್ಲಿವೆ. ಇತ್ತ ಪವರ್‌ಗ್ರಿಡ್, ಎನ್‌ಟಿಪಿಸಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿ ಶೇ. ೨.೭೫ರಷ್ಟು ಏರಿಕೆ ಕಂಡಿವೆ. ಇಂದು ಷೇರು ಮಾರುಕಟ್ಟೆಯ ೨,೫೪೮ ಸಂಸ್ಥೆಯ ಷೇರುಗಳು ಕುಸಿತ ಕಂಡಿದ್ದರೆ, ೮೨೬ ಸಂಸ್ಥೆಗಳ ಷೇರುಗಳು ಏರಿಕೆ ಕಂಡಿವೆ. ಅಂತೆಯೇ ೧೦೧ ಸಂಸ್ಥೆಗಳ ಷೇರುಗಳ ಮೌಲ್ಯ ಬದಲಾಗದೆ ಉಳಿದಿವೆ.

ಅಮಿತ್ ಶಾ ದೆಹಲಿಗೆ ಹೋದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ

ಬೆಂಗಳೂರು, ಮೇ ೪: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದು ಹೋಗಿ ಆಗಿದೆ. ಈಗ ಎಲ್ಲರ ಚಿತ್ತ ದೆಹಲಿಯತ್ತವಿದ್ದು, ನಾಯಕತ್ವ ಬದಲಾವಣೆ ಮಾಡುತ್ತಾರೆಯೇ, ಸಂಪುಟ ಪುನರ್ರಚನೆಯೇ, ಸಂಪುಟ ವಿಸ್ತರಣೆಯೇ ಎಂಬ ಚರ್ಚೆ, ಕುತೂಹಲ ಉಂಟಾಗಿದೆ. ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ವಿಚಾರವನ್ನು ಅಮಿತ್ ಶಾ ದೆಹಲಿಗೆ ಹೋದ ಬಳಿಕ ಮಾತನಾಡುತ್ತೇವೆ ಎಂದಿದ್ದಾರೆ. ಅಮಿತ್ ಶಾ ನಿರ್ಧಾರ ಹೊರಬಂದ ನಂತರ ತೀರ್ಮಾನವಾಗಲಿದೆ. ಮುಂದಿನ ವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳ ಪ್ರತ್ಯೇಕ ಸಭೆಯಿದೆ. ವಿವಿಧ ಇಲಾಖೆಗಳ ಅಭಿವೃದ್ಧಿ, ಅನುಷ್ಠಾನದ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ಏನೇ ಬದಲಾವಣೆ ಮಾಡುವುದಿದ್ದರೂ ಹೈಕಮಾಂಡ್ ಅಳೆದು ತೂಗಿ ಮಾಡಲಿದೆ. ಅಸಮಾಧಾನ ಸ್ಫೋಟವಾಗದಂತೆ ನೋಡಿಕೊಳ್ಳಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ. ಪ್ರಧಾನಿ ಮೋದಿಯವರು ಯುರೋಪ್ ದೇಶಗಳ ಪ್ರವಾಸ ಮುಗಿಸಿ ದೆಹಲಿಗೆ ಮೇ ೫ನೇ ತಾರೀಕು ವಾಪಸ್ಸಾಗಲಿದ್ದಾರೆ. ಅದರ ನಂತರವೇ ರಾಜ್ಯ ಸಚಿವ ಸಂಪುಟ ಬಗ್ಗೆ ನಿರ್ಧಾರವಾಗಲಿದೆ.

ಕೆಪಿಎಸ್‌ಸಿ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ, ಎಎಪಿ ಮುಖಂಡರ ಬಂಧನ

ಬೆAಗಳೂರು, ಮೇ ೪: ಕೆಪಿಎಸ್‌ಸಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಫ್ರೀಡಂ ಪಾರ್ಕ್ನಿಂದ ಕೆಪಿಎಸ್‌ಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಎಎಪಿ ಕಾರ್ಯಕರ್ತರನ್ನು ಪೊಲೀಸರು ಆರಂಭದಲ್ಲೇ ಬಂದಿಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ಬೆಂಗಳೂರು ಘಟಕ ಅಧ್ಯಕ್ಷ ಮೋಹನ್ ದಾಸರಿ, ಒಂದು ಕಡೆ ವಿದ್ಯಾರ್ಹತೆಗೆ ಯೋಗ್ಯವಾದ ಕೆಲಸ ಸಿಗುತ್ತಿಲ್ಲ. ಮತ್ತೊಂದು ಕಡೆ ಸರ್ಕಾರಿ ಉದ್ಯೋಗಗಳನ್ನು ಮಾರಿಕೊಂಡು, ಅರ್ಹರಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ. ಇದರಿಂದಾಗಿ ಸರ್ಕಾರಿ ಉದ್ಯೋಗಗಳು ಉಳ್ಳವರು ಹಾಗೂ ಭ್ರಷ್ಟರ ಪಾಲಾಗುತ್ತಿವೆ ಎಂದು ಆರೋಪಿಸಿದರು. ನಾಡಿನ ಯುವಜನತೆಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಕೆಪಿಎಸ್‌ಸಿ ಸ್ಥಾಪಿಸಲಾಗಿದೆ. ಆದರೆ, ಇದು ಉದ್ಯೋಗಗಳನ್ನು ಭ್ರಷ್ಟ ರಾಜಕಾರಣಿಗಳಿಗೆ ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವ ಅಂಗಡಿಯಾಗಿ ಪರಿವರ್ತನೆಗೊಂಡಿದೆ. ಅಕ್ರಮಕ್ಕೆ ಹೆಸರುವಾಸಿಯಾಗಿರುವ ಕೆಪಿಎಸ್‌ಸಿಯನ್ನು ಸರಿದಾರಿಗೆ ತರಲು ಸಾಧ್ಯವಾಗದಿದ್ದರೆ ಅದನ್ನು ಮುಚ್ಚಿ ಬಿಡುವುದೇ ಒಳ್ಳೆಯದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಕೆ ಸಾಧ್ಯತೆ

ಬೆಂಗಳೂರು, ಮೇ ೪: ಬೇಸಿಗೆ ಬಿರು ಬಿಸಿಲಿನ ನಡುವೆ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಅರಬಿಯನ್ ಸಮುದ್ರದಲ್ಲಿ ಚಂಡಮಾರುತದ ಕಾರಣದಿಂದ ತಾ. ೬ ರಿಂದ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿರುವುದಾಗಿ ಸೂಚನೆ ನೀಡಲಾಗಿದೆ. ಮಂಗಳವಾರ ಸಂಜೆ ಬೆಂಗಳೂರು ನಗರದಲ್ಲಿನ ಗರಿಷ್ಠ ಉಷ್ಣಾಂಶ ೩೪ ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಅಚ್ಚರಿಗೆ ಕಾರಣವಾಯಿತು. ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆಯಿರುವುದರಿಂದ ತಾ. ೬ ರಿಂದ ಕಡಿಮೆ ಒತ್ತಡ ಪರಿಸ್ಥಿತಿ ಏರ್ಪಟ್ಟು, ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.