ಗೋಣಿಕೊಪ್ಪ ವರದಿ, ಮೇ ೫: ಯರವ ಸಮಾಜದ ವತಿಯಿಂದ ತಿತಿಮತಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಯರವ ಜನಾಂಗದ ‘ಎವುಲಾತಿಲ್ಲೇರಂಡ’ ಕ್ರಿಕೆಟ್ ಟೂರ್ನಿಯಲ್ಲಿ ಬ್ಲೂಬಾಯ್ಸ್ ತಂಡ ಸೆಮಿಫೈನಲ್ ಪ್ರವೇಶ ಪಡೆದಿದೆ.

ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಟೀಂ ಸ್ಟಿಂಗರ್ಸ್ ತಂಡವನ್ನು ೩೦ ರನ್‌ಗಳಿಂದ ಮಣಿಸಿತು. ಬ್ಲೂಬಾಯ್ಸ್ ನೀಡಿದ ೬೩ ರನ್‌ಗಳ ಗುರಿ ಬೆನ್ನೆತ್ತಿದ ಟೀಂ ಸ್ಟಿಂಗರ್ಸ್ ೩೨ ರನ್‌ಗಳಿಗೆ ಪಥನಗೊಂಡಿತು.

ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ಕುಶಾಲನಗರ, ಬ್ಲೂಬಾಯ್ಸ್, ಪವರ್ ಕ್ರಿಕೆಟರ್ಸ್, ಸ್ಟಾರ್ ಇಲೆವೆನ್, ಟೀಂ ಸ್ಟಿಂಗರ್ಸ್ ಗೆಲುವು ದಾಖಲಿಸಿದವು.

ಕುಶಾಲನಗರ ತಂಡಕ್ಕೆ ಹರಿಹರ ವಿರುದ್ಧ ಗೆಲುವು ಲಭಿಸಿತು. ಬ್ಲೂಬಾಯ್ಸ್ ತಂಡವು ಜೆ.ಕೆ ಫ್ರೆಂಡ್ಸ್ ತಂಡವನ್ನು ಮಣಿಸಿತು. ಪವರ್ ಕ್ರಿಕೆಟರ್ಸ್ ತಂಡವು ಹುದೂರು ತಂಡವನ್ನು ಸೋಲಿಸಿತು. ಟೀಂ ಸ್ಟಿಂಗರ್ಸ್ ತಂಡಕ್ಕೆ ರಾಯಲ್ ಕ್ರಿಕೆಟರ್ಸ್ ವಿರುದ್ಧ ಗೆಲುವು ದೊರೆಯಿತು. ಸ್ಟಾರ್ ಇಲೆವೆನ್ ತಂಡವು ಕುಟ್ಟಿ ಫ್ರೆಂಡ್ಸ್ ತಂಡವನ್ನು ಮಣಿಸಿತು.