ಸೋಮವಾರಪೇಟೆ, ಮೇ ೪: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ಹಾಗೂ ಐಗೂರಿನ ಪಾರ್ವತಿ ಗ್ಯಾಸ್ ಏಜೆನ್ಸಿ ಸಹಯೋಗದಲ್ಲಿ ಬಜೆಗುಂಡಿಯ ಸಮುದಾಯ ಭವನದಲ್ಲಿ ಕಾರ್ಮಿಕ ದಿನಾಚರಣೆ ಹಾಗೂ ಉಜ್ವಲ್ ದಿವಸ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಬೇಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್, ದೇಶದ ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಉಜ್ವಲ ಯೋಜನೆಯ ಮೂಲಕ ಉಚಿತವಾಗಿ ಅನಿಲ ಸಂಪರ್ಕವನ್ನು ಕೇಂದ್ರ ಸರ್ಕಾರ ವಿತರಿಸುವ ಮೂಲಕ ಬಡಜನರ ಕಣ್ಣೀರನ್ನು ಒರೆಸುವ ಮಹತ್ಕಾರ್ಯ ಮಾಡಿದೆ ಎಂದರು.

೨೦೧೬ರ ಮೇ ೧ ರಂದು ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಲ್‌ಪಿಜಿ ಪಂಚಾಯತ್ ಮತ್ತು ಸುರಕ್ಷತಾ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಅಗ್ನಿಶಾಮಕದಳದ ಇಲಾಖೆಯ ಸಿಬ್ವಂದಿ ಈಶ್ವರ್ ಅವರು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅನಿಲ ಬಳಕೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರಲ್ಲದೇ, ಅವಘಡಗಳು ಸಂಭವಿಸಿದಾಗ ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತ ಪಡಿಸಿದರು.

ಪಾರ್ವತಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಮುರಳೀಧರ್ ಪ್ರಾಸ್ತಾವಿಕ ನುಡಿಯಾಡಿದರು. ವೇದಿಕೆಯಲ್ಲಿ ಅಗ್ನಿಶಾಮಕದಳದ ಸಹಾಯಕ ಠಾಣಾಧಿಕಾರಿ ಪಿ.ಎಸ್. ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ತಿಮ್ಮಪ್ಪನಾಯಕ್, ಲತ, ಪುಷ್ಪಾವತಿ, ಕನಕರಾಜು, ಭರತ್ ರೈ, ಪಿಡಿಒ ಅಂಜನಾದೇವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳು, ಅಗ್ನಿಶಾಮಕ ಇಲಾಖಾ ಸಿಬ್ಬಂದಿಗಳು, ಬೇಳೂರು ಗ್ರಾಪಂ ಸಿಬ್ಬಂದಿಗಳು ಮತ್ತು ಹೆಚ್‌ಪಿ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.