*ಸಿದ್ದಾಪುರ, ಮೇ ೪: ಮರಗೋಡು ಸಮೀಪ ಅರೆಕಾಡು ಬಳಿಯ ಕಾಟೆಬಾಣೆಯಲ್ಲಿ ತಮ್ಮ ಜೊತೆಗಾರನನ್ನು ಕಳೆದುಕೊಂಡ ಮರುಕದಲ್ಲಿ ಕಾಡಾನೆಗಳ ಹಿಂಡು ಘೀಳಿಡುತ್ತಿರುವ ದೃಶ್ಯ ಕಂಡು ಬಂದಿದೆ.

ಗಾಳಿ, ಮಳೆಗೆ ವಿದ್ಯುತ್ ಕಂಬದ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ನೆಲಮಟ್ಟದಲ್ಲಿದ್ದ ತಂತಿ ತುಳಿದು ಇಪ್ಪತ್ತೆರಡು ವರ್ಷದ ಕಾಡಾನೆಯೊಂದು ಮೃತಪಟ್ಟಿತ್ತು. ಕಳೇಬರದ ಅಂತ್ಯ ಸಂಸ್ಕಾರವನ್ನೂ ಮಾಡಲಾಗಿತ್ತು. ಆದರೆ ಇದರ ಜೊತೆಗಿದ್ದ ಸುಮಾರು ೧೯ ಕಾಡಾನೆಗಳ ಹಿಂಡು ಜೊತೆಗಾರನನ್ನು ಹುಡುಕಿಕೊಂಡು ಸುತ್ತಮುತ್ತಲ ಗ್ರಾಮಗಳ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿವೆ. ಜೋರಾಗಿ ಘೀಳಿಡುತ್ತಾ ಓಡಾಡುತ್ತಿರುವ ಕಾಡಾನೆಗಳಿಂದ ಗ್ರಾಮಸ್ಥರು, ಬೆಳೆಗಾರರು ಹಾಗೂ ಕಾರ್ಮಿಕರು ಭಯ ಭೀತಗೊಂಡಿದ್ದಾರೆ. ಹಲವು ತೋಟಗಳಿಗೆ ಹಾನಿಯಾಗಿದ್ದು, ಸೂಕ್ತ ಕ್ರಮಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ. -ಅಂಚೆಮನೆ ಸುಧಿ