ಮಡಿಕೇರಿ, ಮೇ ೫ : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನಾಚರಣೆಯು ತಾಲೂಕು ಘಟಕದ ಅಧ್ಯಕ್ಷ ನವೀನ್ ಅಂಬೆಕಲ್ಲು ಅವರ ಅಧ್ಯಕ್ಷತೆಯಲ್ಲಿ ನಗರದ ಎಸ್‌ಜೆಎಸ್‌ವೈ ಸಭಾಂಗಣದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು.
ಕನ್ನಡ ಭಾಷೆ, ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯ, ಕನ್ನಂಬಾಡಿ ಕಟ್ಟೆ (ಕೆಆರ್‌ಎಸ್), ಭದ್ರಾವತಿಯಲ್ಲಿ ಕಾಗದ ಕಾರ್ಖಾನೆ, ಮೈಸೂರು ಬ್ಯಾಂಕ್, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಹೀಗೆ ಹತ್ತು, ಹಲವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಅವರು ಸ್ಮರಿಸಿದರು.
ವಯಸ್ಕರಿಗೆ ಶಿಕ್ಷಣ, ಮೀಸಲಾತಿ ಹೀಗೆ ಹಲವಾರು ಜನಪರ ಕಾರ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣಕರ್ತರಾಗಿದ್ದಾರೆ ಎಂದು ಕೇಶವ ಕಾಮತ್ ಹೇಳಿದರು.
ಸಾಹಿತಿ ಬಿ.ಎ. ಷಂಶುದ್ದೀನ್ ಮಾತನಾಡಿ ಕನ್ನಡ ನಾಡು ಹತ್ತು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಕಾಲದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ‘ಮೈಸೂರು ಸಂಪದಭ್ಯುದಯ ಸಮಾಜ’ವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಸಂಸ್ಥೆಯ ಅಗತ್ಯವಿದೆ ಎಂದು ಅರಿತು ಮೇ, ೦೫, ೧೯೧೫ ರಲ್ಲಿ ಬೆಂಗಳೂರಿನ ಸರ್ಕಾರಿ ಹೈಸ್ಕೂಲ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಉದಯವಾಯಿತು ಎಂದು ಅವರು ಸ್ಮರಿಸಿದರು.
ಕರ್ನಾಟಕ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಎಚ್.ವಿ. ನಂಜುAಡಯ್ಯ ಅವರು ಆಯ್ಕೆಯಾಗಿದ್ದರು ಎಂದು ತಿಳಿಸಿದರು.
೧೯೭೦ ರಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತು. ಮೊದಲ ಅಧ್ಯಕ್ಷರಾಗಿ ಡಿ.ಜೆ. ಪದ್ಮನಾಭ ಅವರು ಕಾರ್ಯನಿರ್ವಹಿಸಿ ದರು ಎಂದು ಬಿ.ಎ.ಷಂಶುದ್ದೀನ್ ವಿವರಿಸಿದರು.
ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ಕ್ರಮಗಳು, ಸಾಹಿತ್ಯ ಸಮ್ಮೇಳನಗಳು, ಧತ್ತಿ ಉಪನ್ಯಾಸ, ವಿಚಾರ ಸಂಕಿರಣ, ಕವಿಗೋಷ್ಠಿ, ಕಮ್ಮಟಗಳು ಹೀಗೆ ಹಲವು ಕನ್ನಡ ಸಾಹಿತ್ಯ ಪರ ಚಟುವಟಿಕೆಗಳು ನಡೆಯುತ್ತಿವೆ. ಟಿ.ಪಿ. ರಮೇಶ್ ಅವರ ನೇತೃತ್ವದಲ್ಲಿ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೪ರಲ್ಲಿ ನಡೆದಿದ್ದು ವಿಶೇಷವೇ ಸರಿ ಎಂದು ಅವರು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ಹತ್ತು ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಹಾಗೆಯೇ ೫೦ ದತ್ತಿನಿಧಿ ಪ್ರಶಸ್ತಿಗಳನ್ನು ಹೆಚ್ಚಿಸಬೇಕೆಂದು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಾಹಿತಿ ಬಿ.ಆರ್. ಜೋಯಪ್ಪ ಮಾತನಾಡಿ ಸಾಹಿತ್ಯ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳು ವಂತಾಗ ಬೇಕು. ಬರವಣಿಗೆಯಲ್ಲಿ ವಿಮರ್ಶೆಯು ಸಹ ಅಗತ್ಯ ಎಂದು ಹೇಳಿದರು.
ಬಾಳೆಯಡ ಕಿಶನ್ ಪೂವಯ್ಯ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಶಾಲಾ ಕಾಲೇಜು ಗಳಲ್ಲಿ ಹೆಚ್ಚು ನಡೆಯುವಂತಾಗಬೇಕು. ಯುವ ಜನರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವಂತಾಗ ಬೇಕು ಎಂದರು.
ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸನ್ಮಾನ ಸ್ವೀಕರಿಸಿದ ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥೆ ಮಿಲನ ಭರತ್ ಮಾತನಾಡಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಬೆಳೆಸುವಂತಾಗ ಬೇಕು ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ನವೀನ್ ಅಂಬೆಕಲ್ಲು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಣಿ ಮಾಚಯ್ಯ, ಕಾವೇರಮ್ಮ ಸೋಮಣ್ಣ, ಕಾಲೂರು ನಾಗೇಶ್, ಕುಡೆಕಲ್ ಸಂತೋಷ್, ಮುನೀರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಂಡುವAಡ ಬಿ. ಜೋಯಪ್ಪ ಇತರರು ಇದ್ದರು.
ಕಸಾಪ ತಾಲೂಕು ಕಾರ್ಯದರ್ಶಿ ಕೆ.ಯು. ರಂಜಿತ್ ಸ್ವಾಗತಿಸಿದರು. ಪ್ರತಿಮಾ ರೈ ನಿರೂಪಿಸಿದರು. ಸ್ನೇಹ ನಾಡಗೀತೆ ಹಾಡಿದರು. ಗೀತಾ ಗಿರೀಶ್ ವಂದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸಾಹಿತ್ಯ ಪರಿಷತ್ತು ಕಚೇರಿ ಆವರಣದಲ್ಲಿ ಕನ್ನಡ ಧ್ವಜಾರೋಹಣ ವನ್ನು ತಾಲೂಕು ಘಟಕದ ಅಧ್ಯಕ್ಷ ನವೀನ್ ಅಂಬೆಕಲ್ಲು ನೆರವೇರಿಸಿದರು.