ಸೋಮವಾರಪೇಟೆ, ಮೇ ೩: ೧೨ನೇ ಶತಮಾನದ ಮಹಾನ್ ದಾರ್ಶನಿಕರಾಗಿದ್ದ ಬಸವಣ್ಣ ಅವರು ಗೌತಮ ಬುದ್ಧನ ನಂತರ ಸಮಾಜದಲ್ಲಿ ಸಮಾನತೆ ಸಾರಿದ ಮೊದಲಿಗರು. ಇವರ ಎಲ್ಲಾ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸುಂಟಿಕೊಪ್ಪದ ಬಾಲ ವಾಗ್ಮಿ, ೬ನೇ ತರಗತಿ ವಿದ್ಯಾರ್ಥಿನಿ ಎ.ಎಸ್. ಶ್ರೀಶಾ ಅಭಿಪ್ರಾಯಿಸಿದಳು.

ತಾಲೂಕು ಆಡಳಿತ ಮತ್ತು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಅಟಲ್‌ಜೀ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದಳು.

ಬಸವಣ್ಣ ಅವರ ಪ್ರತಿ ಮಾತುಗಳು ಎಲ್ಲರ ಬದುಕಿಗೆ ಪ್ರೇರಣೆಯಾಗಿದೆ. ಸಮಾಜದಲ್ಲಿ ಬೇರುಬಿಟ್ಟಿದ್ದ ಅಸಮಾನತೆ, ಅಂಧಃಶ್ರದ್ಧೆ, ಸಾಮಾಜಿಕ ಕಂದಾಚಾರಗಳನ್ನು ಧಿಕ್ಕರಿಸಿದ ಧೀಮಂತ ವ್ಯಕ್ತಿತ್ವ. ಬುದ್ದನ ನಂತರ ಸಮಾನತೆಯ ಬಗ್ಗೆ ಧ್ವನಿ ಎತ್ತಿದ ಮೊದಲಿಗರಾದ ಬಸವಣ್ಣ ಅವರು ದೇವರು ನಮ್ಮೊಳಗೆ ಇದ್ದಾನೆ ಎಂಬ ಸಂದೇಶವನ್ನು ಸಾರಿದವರು ಎಂದು ಬಣ್ಣಿಸಿದಳು.

ನಾಣ್ಯದ ಮೇಲೆ ಭಾವಚಿತ್ರ ಮುದ್ರಿಸಲ್ಪಟ್ಟ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆ ಬಸವಣ್ಣ ಅವರಿಗಿದ್ದು, ಇವರ ತತ್ವಗಳನ್ನು ಜಗತ್ತು ಒಪ್ಪಿರುವುದಕ್ಕೆ ಲಂಡನ್‌ನಲ್ಲಿ ನಿರ್ಮಾಣಗೊಂಡ ಪ್ರತಿಮೆಯೂ ಸಾಕ್ಷಿಯಾಗಿದೆ. ಅನುಭವ ಮಂಟಪದ ಮೂಲಕ ಸಂಸತ್ತಿನ ಕಲ್ಪನೆಯನ್ನು ೧೨ನೇ ಶತಮಾನ ದಲ್ಲಿಯೇ ಮೂಡಿಸಿದ್ದ ಮಹಾನ್ ಮಾನವತಾವಾದಿಯ ಸ್ಮರಣೆ ಅನುದಿನವೂ ನಡೆಯಬೇಕಿದೆ ಎಂದಳು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾದ್ರೆ ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರಣ ಬಸವಣ್ಣ ಅವರ ಜೀವನ ಚರಿತ್ರೆಯ ಬಗ್ಗೆ ಎಲ್ಲರೂ ಅರಿತುಕೊಂಡು, ಅವರ ಮಾರ್ಗ ದರ್ಶನದಡಿ ಜೀವನ ಸಾಗಿಸಬೇಕು. ಆಗ ಮಾತ್ರ ಮಹನೀಯರ ಜನ್ಮ ದಿನವನ್ನು ಆಚರಿಸುವುದಕ್ಕೆ ಅರ್ಥ ಬರುತ್ತದೆ.

ಮುಖ್ಯ ಅತಿಥಿಯಾಗಿದ್ದ ತಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಮಹನೀಯರ ಆದರ್ಶಗಳು ಪಾಲನೆಯಾಗ ದಿರುವುದು ದುರಂತ. ಸಮಾನತೆಯ ಹರಿಕಾರರಾಗಿ ಸಮಾಜದ ಅಂಕುಡೊAಕುಗಳನ್ನು ತಿದ್ದಿದ ಬಸವಣ್ಣ ಅವರ ಬದುಕು ಎಲ್ಲರಿಗೂ ಆದರ್ಶವಾಗಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ತಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ತಹಶೀಲ್ದಾರ್ ಆರ್. ಗೋವಿಂದ ರಾಜು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಕಸಾಪ ಮಾಜಿ ಅಧ್ಯಕ್ಷ ಜೆ.ಸಿ. ಶೇಖರ್, ವೀರಶೈವ ಸಮಾಜದ ಅಧ್ಯಕ್ಷ ಬಿ.ಪಿ. ಶಿವಕುಮಾರ್, ಅಬಕಾರಿ ಇಲಾಖೆಯ ನಿರೀಕ್ಷಕ ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಂದಾಯ ಇಲಾಖೆಯ ಅರುಣ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಎಸ್.ಮಹೇಶ್, ಬಿಇಓ ಕಚೇರಿಯ ಲೋಕೇಶ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶ್ರಮಿಕ ವರ್ಗದ ಶಿವಣ್ಣ ಮತ್ತು ಪಳನಿಸ್ವಾಮಿ ಅವರುಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಸಮೀಪ ಇರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಂಗಳವಾದ್ಯಗಳೊAದಿಗೆ ಬಸವೇಶ್ವರರ ಭಾವಚಿತ್ರವನ್ನು ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.