...
ಕುಶಾಲನಗರ, ಮೇ ೩: ಕನ್ನಡ ಸಾಹಿತ್ಯ ಪರಿಷತ್ತಿನ ಕುಶಾಲನಗರ ತಾಲೂಕು ಘಟಕದ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಪಟ್ಟಣದ ಆದರ್ಶ ದ್ರಾವಿಡ ಕಾಲೋನಿಯ ಪಟ್ಟಾಲಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣದ ಕಾಯಕ ಯೋಗಿಗಳಾದ ಪೌರಕಾರ್ಮಿಕರ ಕುಟುಂಬ ಸದಸ್ಯರೊಂದಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ, ಬಸವೇಶ್ವರರು ಸಮ ಸಮಾಜವನ್ನು ಕಟ್ಟಲು ಮಾಡಿದ ಹೋರಾಟಗಳು, ಅನುಭವಿಸಿದ ಅವಮಾನಗಳು ಹಾಗೂ ಮಾಡಿದ ಸಾಮಾಜಿಕ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದರು.
ಮುಖ್ಯ ಅತಿಥಿಯಾಗಿದ್ದ ಕುಶಾಲನಗರದ ಸಾಮಾಜಿಕ ಹೋರಾಟಗಾರ ವಿ.ಪಿ. ಶಶಿಧರ್, ಬಸವೇಶ್ವರರ ಚಿಂತನೆಗಳು ಸರ್ವ ಸ್ಪರ್ಶಿ, ಸರ್ವ ವ್ಯಾಪಿಯಾಗಿವೆ. ಜಗತ್ತು ಜೀವಂತವಿರುವವರೆಗೂ ಬಸವೇಶ್ವರರ ತತ್ವಾದರ್ಶಗಳು, ಚಿಂತನೆಗಳು ಜೀವಿಸುತ್ತವೆ.
ಹನ್ನೆರಡನೇ ಶತಮಾನದಲ್ಲಿ ಅಶೋಕ ಸಾಮ್ರಾಟನಂತಹ ರಾಜರ ಆಸರೆ ಬಸವೇಶ್ವರರಿಗೆ ಸಿಕ್ಕಿದ್ದರೆ ಇಂದು ಸಮ ಸಮಾಜವನ್ನು ನಾವು ಕಾಣಬಹುದಿತ್ತು.
ಮೀಸಲಾತಿಯ ಪ್ರಶ್ನೆಗಳೇ ಉದ್ಭವಿಸುತ್ತಿರಲಿಲ್ಲ. ಬಸವೇಶ್ವರರ ಚಿಂತನೆಗಳು ಸಾಕಾರಗೊಂಡಿದ್ದಲ್ಲಿ ನೂರಾರು ಸಂಖ್ಯೆಯಲ್ಲಿ ಡಾ. ಅಂಬೇಡ್ಕರ್ರAತಹ ಮಹಾನ್ ಶಕ್ತಿಗಳು ಉದಯವಾಗುತ್ತಿದ್ದರು ಎಂದು ಶಶಿಧರ್ ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಡಾ. ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾಜವನ್ನು ಸುಂದರಗೊಳಿಸಿದರೆ, ಬಸವೇಶ್ವರರ ಚಿಂತನೆಗಳು ಮಾನವನ ಜೀವನಕ್ಕೆ ದಾರಿದೀಪವಾಗಿವೆ. ಇನ್ನಾದರೂ ಮಹನೀಯರ ಆದರ್ಶಗಳನ್ನು ಅರಿಯುವ ಮೂಲಕ ನಾವು ಸಮ ಸಮಾಜ ಕಟ್ಟಲು ಮುಂದಾಗಬೇಕಿದೆ ಎಂದರು.
ಇದೇ ಸಂದರ್ಭ ಪೌರ ಕಾರ್ಮಿಕರ ಕುಟುಂಬದ ಮಕ್ಕಳಿಗೆ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಪೌರಕಾರ್ಮಿಕ ಕುಟುಂಬದ ಸ್ನಾತಕೋತ್ತರ ವಿದ್ಯಾರ್ಥಿನಿ ತ್ರಿವೇಣಿ ಬಣ್ಣಾರಿ ಎಂಬವರನ್ನು ಈ ಸಂದರ್ಭ ಗೌರವಿಸಲಾಯಿತು.
ಪಟ್ಟಾಲಮ್ಮ ದೇವಾಲಯದ ಸಮಿತಿ ಅಧ್ಯಕ್ಷ ವಿಶ್ವನಾಥ್, ಪರಿಷತ್ತಿನ ಕೋಶಾಧಿಕಾರಿ ಕೆ.ವಿ. ಉಮೇಶ್, ಕಾರ್ಯದರ್ಶಿ ಮಂಜು ಭಾರ್ಗವಿ, ಟಿ.ಬಿ. ಮಂಜುನಾಥ್ ಮೊದಲಾದವರಿದ್ದರು.