ವೀರಾಜಪೇಟೆ, ಮೇ ೩: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ದುರ್ಮರಣ ಹೊಂದಿರುವ ಘಟನೆ ಆರ್ಜಿ ಗ್ರಾಮದಲ್ಲಿ ಸಂಭವಿಸಿದೆ.
ವೀರಾಜಪೇಟೆ ತಾಲೂಕು ಆರ್ಜಿ ಗ್ರಾ.ಪಂ. ವ್ಯಾಪ್ತಿಯ ಕಬ್ಬಚ್ಚೀರ ಅಯ್ಯಪ್ಪ ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಣಿ ಎರವರ ಬೋಳಿ ಎಂಬುವವರ ಪುತ್ರ ತೋಲ (ಮಂಜ-೩೮) ವಿದ್ಯುತ್ ಸ್ಪರ್ಶಗೊಂಡು ಮೃತನಾದ ವ್ಯಕ್ತಿ.
ತೋಲ ಮತ್ತು ಕಾವೇರಿ ದಂಪತಿ ಅಯ್ಯಪ್ಪ ಎಂಬುವವರ ತೋಟದ ಲೈನ್ ಮನೆಯಲ್ಲಿ ಕೆಲವು ವರ್ಷ ಗಳಿಂದ ಕಾರ್ಮಿಕರಾಗಿ ದುಡಿದು ಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಎಂದಿನAತೆ ತೋಟದಲ್ಲಿ ಮರಕಸಿ ಮಾಡಲು ತೋಲ ಕಬ್ಬಿಣದ ಏಣಿಯೊಂದಿಗೆ ತೆರಳಿದ್ದಾರೆ.
ಸುಮಾರು ೧೧ ಗಂಟೆಯ ಸಮಯದಲ್ಲಿ ಆಕಸ್ಮಿಕವಾಗಿ ಏಣಿ ತೋಟದ ಮಧ್ಯ ಭಾಗದಿಂದ ಹಾದು ಹೋಗಿರುವ ೧೧ ಕೆ.ವಿ ವಿದ್ಯುತ್ ತಂತಿಗೆ ಸ್ಪರ್ಶವಾಗಿದೆ. ಏಣಿಯ ಮೂಲಕ ವಿದ್ಯುತ್ ಪ್ರವಹಿಸಿ ಕಾರ್ಮಿಕ ತೋಲ ಸುಟ್ಟು ಕರಕÀಲಾದ ಗಾಯಗಳಿಂದ ಸ್ಥಳದಲ್ಲೇ ಮೃತರಾಗಿದ್ದಾರೆ. ಸನಿಹದಲ್ಲೇ ಇದ್ದ ಕಾರ್ಮಿಕರು ತೋಟದ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ನಗರ ಪೊಲೀಸ್ ಸಿಬ್ಬಂದಿಗಳು ಮಹಜರು ಮಾಡಿ ಮೃತದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
- ಕಿಶೋರ್ ಕುಮಾರ್ ಶೆಟ್ಟಿ.