ಸಿದ್ದಾಪುರ, ಮೇ ೩: ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟ ಘಟನೆ ನೆಲ್ಲಿಹುದಿಕೇರಿಯಲ್ಲಿ ಸಂಭವಿಸಿದೆ.
ನೆಲ್ಲಿಹುದಿಕೇರಿ ಸಮೀಪದ ಅತ್ತಿಮಂಗಲ ಬಳಿಯ ಅರೆಕಾಡು ರಸ್ತೆಯಲ್ಲಿರುವ ವಿವೇಕ್ ಅಪ್ಪಯ್ಯ ಅವರ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿರುವ ೨೨ ವಯಸ್ಸಿನ ಗಂಡಾನೆಯ ಶವ ಪತ್ತೆಯಾಗಿದೆ.
ಭಾನುವಾರ ಸುರಿದ ಭಾರೀ ಮಳೆಗೆ ಕಾಫಿ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಮರದ ಕೊಂಬೆ ಮುರಿದು ಬಿದ್ದಿದೆ. ನಿರ್ವಹಣೆ ಇಲ್ಲದ ತೋಟದೊಳಗೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಿದ್ದಿದ್ದು, ನಾಲ್ಕು ವಿದ್ಯುತ್ ಮಾರ್ಗದ ಪೈಕಿ ಎರಡರಲ್ಲಿ ವಿದ್ಯುತ್ ಸಂಪರ್ಕ ಇದ್ದುದರಿಂದ ವಿದ್ಯುತ್ ಕಡಿತಗೊಳ್ಳದ್ದರಿಂದ ಮರ ಬಿದ್ದಿರುವದು ಯಾರಿಗೂ ಗಮನಕ್ಕೆ ಬಂದಿಲ್ಲ. ಹಾಗಾಗಿ ಆನೆ ಸತ್ತಿರುವದು ಯಾರಿಗೂ ಗೊತ್ತಾಗಲಿಲ್ಲ.
ಇಂದು ಪಕ್ಕದ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ದುರ್ವಾಸನೆ ಬಂದಿದೆ. ಪರಿಶೀಲಿಸಿದಾಗ ವಿವೇಕ್ ಅವರ ತೋಟದಲ್ಲಿ ಕಾಡಾನೆಯ ಮೃತದೇಹ ಪತ್ತೆಯಾಗಿದೆ. ಕೂಡಲೇ ಕಾರ್ಮಿಕರು ವಿವೇಕ್ ಅವರ ಗಮನಕ್ಕೆ ತಂದ ಬಳಿಕ ಅವರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ ಎನ್ ಎನ್ ಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಪಶುವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ಕನ್ನಂಡ ರಂಜನ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ಸ್ಥಳದಲ್ಲೇ ಆನೆಯ ಮರಣೋತ್ತರ ಪರೀಕ್ಷೆ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕೊಂಬೆ ಸಹಿತ ಮೂರು, ನಾಲ್ಕು ವಿದ್ಯುತ್ ತಂತಿಗಳು ಆನೆಯ ತಲೆ ಮೇಲೆ ಹಾಗೂ ಕಾಲಿನ ಮೇಲೆ ಬಿದ್ದಿದ್ದು, ತಲೆಗೆ ವಿದ್ಯುತ್ ಪ್ರಹರಿಸಿದ್ದರಿಂದ ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ. ಪ್ರಕರಣಕ್ಕೆ ಸಂಬAಧಿಸಿ ದಂತೆ ಅರಣ್ಯ ಇಲಾಖೆ ವತಿಯಿಂದ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಚಿತ್ರ, ವರದಿ: ವಾಸು.