ಮಡಿಕೇರಿ, ಮೇ ೨ : ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಪದ್ಧತಿ, ಪರಂಪರೆಯನ್ನು ಮೈಗೂಡಿಸಿಕೊಂಡು ಜವಬ್ದಾರಿಯುತವಾಗಿ ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ೧೮ ಕೊಡವ ಭಾಷಿಕ ಜನಾಂಗದವರು ಮೂಲಭೂತ ಸೌಕರ್ಯಗಳನ್ನು ಪಡೆಯಲು ಒಗ್ಗಟ್ಟಿನ ಹೋರಾಟ ನಡೆಸುವ ಅನಿವಾರ್ಯತೆಯಿದೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ತಿಳಿಸಿದರು.
ವೀರಾಜಪೇಟೆ ಗಣಪತಿ ಆರ್ಕೆಡ್ ಕಟ್ಟಡದ ಸಭಾಂಗಣದಲ್ಲಿ ನಡೆದ ಕೂಟದ ೨೦೨೧-೨೨ನೇ ಸಾಲಿನ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕೊಡವ ಭಾಷೆ, ಸಂಸ್ಕೃತಿ, ಪದ್ಧತಿ, ಆಚಾರ, ವಿಚಾರ ಅಳಿಯದೆ ಉಳಿದಿರುವುದಕ್ಕೆ ೧೮ ಭಾಷಿಕ ಜನಾಂಗದವರ ಶ್ರಮ, ಕೊಡುಗೆ ಅಪಾರವಾಗಿದೆ. ಬೆಲೆ ಕಟ್ಟಲು ಸಾಧ್ಯವಿಲ್ಲದಷ್ಟರ ಮಟ್ಟಿಗೆ, ಎಲೆ ಮರೆಯ ಕಾಯಿಯಂತೆ ತಮ್ಮ ಬದುಕಿನಲ್ಲಿ ಕಸುಬಿನೊಂದಿಗೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಫಲರಾಗಿದ್ದಾರೆ. ಆದರೂ, ಜನಾಂಗದ ಬಡಕುಟುಂಬಗಳು ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಕೂಟದ ಉಪಾಧ್ಯಕ್ಷ, ವಕೀಲ ಹಾಗೂ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಜಿ.ಅಯ್ಯಪ್ಪ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೊಡವ ಭಾಷಿಕ ಜನಾಂಗದವರನ್ನು ತಾತ್ಸಾರ ಮನೋಭಾವನೆಯಿಂದ ಕಾಣುತ್ತಿದ್ದಾರೆ ಎಂದು ಆರೋಪಿಸಿದರು. ತೀರ ಹಿಂದುಳಿದ ಮೂಲ ನಿವಾಸಿ ಕೊಡವ ಭಾಷಿಕ ಜನಾಂಗದವರ ಸರ್ವತೋಮುಖ ಅಭ್ಯುದಯಕ್ಕಾಗಿ ರಾಜ್ಯ ಸರ್ಕಾರ ಕನಿಷ್ಟ ರೂ.೧೦೦ ಕೋಟಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಅವರು ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಬೇಕೆಂದು ಹೇಳಿದರು.
ತಾ.ಪಂ ಮಾಜಿ ಸದಸ್ಯೆ ನರಿಯಡಮ್ಮಂಡ ಉಮಾಪ್ರಭು ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಹಾಗೂ ಕೊಡವ ಭಾಷಾ ಎಂ.ಎ.ತರಗತಿ ಪ್ರಾಧ್ಯಪಕರಾದ ಅಣ್ಣಾಳಪ್ಪಂಡ ವಾಣಿ ಧರ್ಮಶೀಲ ಮಾತನಾಡಿದರು. ನಮ್ಮ ಜಾತಿ ನಮಗೆ ಶ್ರೇಷ್ಠವಾದದ್ದು, ಯಾರೂ ಕೀಳಿರಿಮೆ ಭಾವನೆ ತೋರಬಾರದು. ಸಮಾಜದಲ್ಲಿ ನಮ್ಮತನದಿಂದಲೇ ಸ್ಥಾನ, ಮಾನ, ಗೌರವ, ಘನತೆ ಗಳಿಸುವಂತಾಗಬೇಕು. ಸಂಸ್ಕೃತಿ, ಸಂಪ್ರದಾಯಗಳನ್ನು ಬೆಳೆಸುವಲ್ಲಿ ೧೮ ಭಾಷಿಕ ಜನಾಂಗದವರು ಒಂದಾಗಿ, ಒಂದೇ ತಂದೆ ತಾಯಿಯ ಮಕ್ಕಳಂತೆ ಬಾಳಿ ಬದುಕುವಂತಾಗಬೇಕೆAದು ಸಲಹೆ ನೀಡಿದರು.
ಜನಾಂಗದ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಯಾವುದೇ ಸಮಸ್ಯೆ ಎದುರಾದರೂ ಕೂಟದ ಮೂಲಕ ಹೋರಾಟಕ್ಕೆ ಮುಂದಾಗಬೇಕು. ಪ್ರತಿಷ್ಠೆಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಬೀದಿಗಿಳಿದು ಹೋರಾಟ ಮಾಡಲು ಸಿದ್ಧ ಇರುವುದಾಗಿ ಬೆಂಬಲ ವ್ಯಕ್ತಪಡಿಸಿದರು.
ಬೈರಕುಂದಿರ ಪ್ರೇಮಾ ಪ್ರಾರ್ಥಿಸಿ, ಕೂಟದ ಖಜಾಂಚಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಪಟ್ಟಚಾರೀರ ದಿನೇಶ್ ಕಾರ್ಯಪ್ಪ ವಂದಿಸಿದರು. ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಕಳೆದ ಮೂರು ವರ್ಷಗಳ ನಡಾವಳಿ ವರದಿಯನ್ನು ಓದಿದರು. ನಡಾವಳಿ ಚರ್ಚೆಯಿಲ್ಲದೆ ಅನುಮೋದಿಸಲ್ಪಟ್ಟಿತು. ಮೃತಪಟ್ಟ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.