ಮಡಿಕೇರಿ, ಮೇ ೨: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಏರ್ಪಡಿಸಲಾಗಿರುವ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ ‘ಕುಟುಂಬ-೨೦೨೨’ನಲ್ಲಿ ಸೋಮವಾರ ಕುಡೆಕಲ್ಲು, ಅಯ್ಯಂಡ್ರ, ಬಳ್ಳಡ್ಕ, ಪಾರೆಮಜಲು ಕುಟುಂಬಗಳು ಪ್ರಿ ಕ್ವಾರ್ಟರ್ಗೆ ಲಗ್ಗೆ ಇಟ್ಟವು.
ಬಾಳಾಡಿ ಮತ್ತು ಉಡುದೋಳಿ ನಡುವೆ ನಡೆದ ಪಂದ್ಯಾಟದಲ್ಲಿ ಬಾಳಾಡಿ ೧೧ ರನ್ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು. ೫ ವಿಕೆಟ್ ಕಳೆದುಕೊಂಡ ಬಾಳಾಡಿ ೪೫ ರನ್ಗಳ ಗುರಿಯನ್ನು ಉಡುದೋಳಿಗೆ ನೀಡಿತು. ಆದರೆ, ೩ ವಿಕೆಟ್ ಕಳೆದು ೩೪ ರನ್ ಮಾತ್ರ ದಾಖಲಿಸಲು ಉಡುದೋಳಿಗೆ ಶಕ್ತವಾಯಿತು.
ನಿಗದಿತ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೬೫ ರನ್ಗಳ ಗುರಿಯನ್ನು ಅಯ್ಯಂಡ್ರ ಎದುರಾಳಿ ತುಂತಜೆಗೆ ನೀಡಿತು. ಗುರಿ ಬೆನ್ನಟ್ಟಿದ ತುಂತಜೆ ೫ ವಿಕೆಟ್ ಕಳೆದು ೪೩ ರನ್ ದಾಖಲಿಸಿ ಸೋಲು ಅನುಭವಿಸಿತು. ಯಾವುದೇ ವಿಕೆಟ್ ನಷ್ಟವಿಲ್ಲದೆ ಬೈಮನ ೧೧೮ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಎದುರಾಳಿ ಕೊಳಂಬೆ ೩ ವಿಕೆಟ್ ಕಳೆದುಕೊಂಡು ೪೩ ರನ್ ಗಳಿಸಿ ೬೯ ರನ್ಗಳ ಅಂತರದಲ್ಲಿ ಸೋಲುಂಡಿತು.
೫ ವಿಕೆಟ್ ನಷ್ಟಕ್ಕೆ ೯೪ ರನ್ ಗಳಿಸಿದ ಕೋಡಿ ವಿರುದ್ಧ ತೂಟೇರ ಸೋಲಿನ ರುಚಿ ಅನುಭವಿಸಿತು. ತೂಟೇರ ೪ ವಿಕೆಟ್ ನಷ್ಟಕ್ಕೆ ೬೪ ರನ್ ದಾಖಲಿಸಿ ೩೦ ರನ್ಗಳ ಅಂತರದಲ್ಲಿ ಸೋಲು ಕಂಡಿತು. ೧ ರನ್ಗಳ ಅಂತರದಲ್ಲಿ ಬೊಳ್ಳುಮಾನಿ ವಿರುದ್ಧ ಮೂಲೆಮಜಲು ವಿಜಯ ಶಾಲಿಯಾಯಿತು. ೫ ವಿಕೆಟ್ ಕಳೆದುಕೊಂಡು ೪೬ ರನ್ ದಾಖಲಿಸಿದ್ದ ಬೊಳ್ಳುಮಾನಿ ಗುರಿಯನ್ನು ಬೆನ್ನತ್ತಿದ ಮೂಲೆಮಜಲು ೩.೪ ಓವರ್ಗಳಲ್ಲಿ ೪೭ ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.
ಬಾಡನ ವಿರುದ್ಧ ಕುಡೆಕಲ್ಲು ಭರ್ಜರಿ ಜಯ ಸಾಧಿಸಿ ಪ್ರಿ ಕ್ವಾರ್ಟರ್ ಗೆ ಪ್ರವೇಶ ಪಡೆದು ಕೊಂಡಿತು. ನಿಗದಿತ ೬ ಓವರ್ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೩೭ ರನ್ ಗುರಿಯನ್ನು ಕುಡೆಕಲ್ಲು ತಂಡಕ್ಕೆ ನೀಡಿತು. ಕೇವಲ ೨.೩ ಓವರ್ಗಳಲ್ಲಿ ೪೧ ರನ್ ಗಳಿಸಿ ಕುಡೆಕಲ್ಲು ಗೆಲುವು ತನ್ನದಾಗಿಸಿಕೊಂಡಿತು.
ಬಾಳಾಡಿ ನೀಡಿದ ೩೪ ರನ್ಗಳನ್ನು ಬೆನ್ನತ್ತಿದ್ದ ಬಳ್ಳಡ್ಕ ೪.೫ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿ ವಿಜಯಿಯಾಯಿತು. ೨ ವಿಕೆಟ್ ಕಳೆದುಕೊಂಡು ೯೧ ರನ್ ಗುರಿಯನ್ನು ನೀಡಿದ ಅಯ್ಯಂಡ್ರ ವಿರುದ್ಧ ಪಾಂಡನ ೩ ವಿಕೆಟ್ ನಷ್ಟಕ್ಕೆ ೬೪ ರನ್ಗಳಿಸಿ ಸೋಲಿಗೆ ಶರಣಾಯಿತು. ಪೇರಿಯನ ವಿರುದ್ಧ ಪಾರೆಮಜಲು ಗೆದ್ದಿತು. ೪೦/೪ ಗುರಿಯನ್ನು ೪.೧ ಓವರ್ನಲ್ಲಿ ೧ ವಿಕೆಟ್ ನಷ್ಟಕ್ಕೆ ೪೧ ರನ್ ದಾಖಲಿಸಿ ಪಾರೆಮಜಲು ಪ್ರಿ ಕ್ವಾರ್ಟರ್ಗೆ ಅರ್ಹತೆ ಪಡೆದುಕೊಂಡಿತು.
೫ ವಿಕೆಟ್ ನಷ್ಟಕ್ಕೆ ೩೩ ರನ್ ಗುರಿಯನ್ನು ನೀಡಿದ ಕೋಳಿಮಾಡು ವಿರುದ್ಧ ಬೈಮನ ೨.೧ ಓವರ್ನಲ್ಲಿ ೩೭ ರನ್ ದಾಖಲಿಸಿ ವಿಜಯ ಸಾಧಿಸಿತು. ಕೋಡಿ (೬೮/೪) ವಿರುದ್ಧ ಕೇಚಪ್ಪನ (೫೨/೩) ಸೋಲು ಕಾಣಬೇಕಾಯಿತು.