ಇಂದು ಈದುಲ್ ಫಿತರ್ ಎಂಬ ರಂಝಾನ್ ಹಬ್ಬ. ಕಳೆದ ೩೦ ದಿನಗಳಿಂದ ಹಗಲು ವೇಳೆಯಲ್ಲಿ ವ್ರತಾಚರಣೆಕೈಗೊಳ್ಳುವ ಮೂಲಕ ವಿಶೇಷ ಪ್ರಾರ್ಥನೆ, ಜಪ ತಪಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಮುಸ್ಲಿಂ ಬಾಂಧವರು ಕುಟುಂಬ ಸಮೇತ ಸಂಭ್ರಮಿಸುವ ಸುದಿನ.
ಹಬ್ಬದ ದಿನ ಎಲ್ಲ ಮಸೀದಿಗಳಲ್ಲೂ ಬೆಳಿಗ್ಗೆ ವಿಶೇಷ ನಮಾಝ್ ನಡೆಯಲಿದ್ದು, ಜನಾಂಗ ಬಾಂಧರು ಹೊಸ ಉಡುಪು ಧರಿಸಿ, ಮಸೀದಿ ಹಾಗೂ ಈದ್ಗಾ ಮೈದಾನಗಳಿಗೆ ತೆರಳಿ ನಮಾಝ್ನಲ್ಲಿ ಪಾಲ್ಗೊಳ್ಳುತ್ತಾರೆ. ಹಬ್ಬ ದಂದು ಯಾರೋಬ್ಬರೂ ಹಸಿದಿರ ಕೂಡದು ಎಂದು ಸಮುದಾಯದ ಬಡ ಬಗ್ಗರಿಗೆ ಆಹಾರಧಾನ್ಯಗಳನ್ನು ಕಡ್ಡಾಯವಾಗಿ ನೀಡಬೇಕೆಂದು ಧರ್ಮವೂ ತಿಳಿಸಿದೆ. ಫಿತರ್ ಝಕಾತ್ ಎಂಬ ಈ ಧಾನ್ಯ ದಾನವನ್ನು ಮುಸ್ಲಿಮರು ಹಬ್ಬದ ದಿನ ಬೆಳಿಗ್ಗೆ ನೀಡುವುದನ್ನು ಕಾಣಬಹುದು.
ಕುಟುಂಬದ ಯಜಮಾನ ತನ್ನ ಆಶ್ರಯದಲ್ಲಿ ಕಳೆಯುತ್ತಿರುವ ಹೆಂಡತಿ ಮಕ್ಕಳ ಪಾಲಿನ ಝಕಾತ್ ಅನ್ನು ನೀಡಲು ಬಾಧ್ಯಸ್ಥನಾಗಿರುತ್ತಾನೆ. ಊರಿನಲ್ಲಿ ಬಳಸಲ್ಪಡುವ ಅತ್ಯುತ್ತಮ ದರ್ಜೆಯ ಧಾನ್ಯ (ಅಕ್ಕಿ) ವನ್ನು ತಲಾ ೨ ಕೆ. ಜಿ., ಒಂಬೈನೂರು ಗ್ರಾಮ್ ತೂಕದ ಪ್ರಮಾಣದಲ್ಲಿ ನೀಡಿದಲ್ಲಿ ಅದು ಪರಿಪೂರ್ಣ ಎನಿಸಲಿದೆ. ಈ ಧಾನ್ಯದಾನವನ್ನು ಪ್ರತಿಯೊಬ್ಬರೂ ತಾವು ವಾಸವಿರುವ ಊರಿನಲ್ಲೇ ನೀಡತಕ್ಕದ್ದು ಎಂದು ಧರ್ಮ ತಿಳಿಸಿದೆ. ಧಾನ್ಯ ದಾನದ ಮುನ್ನ ಆ ಕುರಿತು ದಾನಿಯೂ ತನ್ನ ಮನದಲ್ಲಿ ದೃಢಸಂಕಲ್ಪ (ನಿಯ್ಯತ್ತ್) ಮಾಡಿಕೊಳ್ಳಬೇಕು. ನಿಯ್ಯತ್ತಿಲ್ಲದ ಯಾವುದೇ ಸತ್ಕರ್ಮಗಳೂ ಇಸ್ಲಾಮಿನಲ್ಲಿ ಸ್ವೀಕಾರಾರ್ಹವಾಗಲಾರದು. ಧಾನ್ಯದಾನವನ್ನು ಬಡವರು ಅರಸಿ ಬರಲು ಅವಕಾಶ ಮಾಡಿಕೊಡದೆ, ಅರ್ಹರ ಮನೆಗೆ ತೆರಳಿ ಕೊಡುವುದೇ ಶ್ರೇಷ್ಠವೆಂದು ಧರ್ಮವೂ ತಿಳಿಸಿದೆ.
ಹಬ್ಬದ ದಿನ ಮುಸ್ಲಿಮರು ಮಾಂಸದೂಟ ಸೇರಿದಂತೆ ಮನೆಯಲ್ಲಿ ವಿಶೇಷ ಅಡುಗೆ ತಯಾರಿಸುತ್ತಾರೆ. ಇಷ್ಟಮಿತ್ರರನ್ನು ಮನೆಗೆ ಆಹ್ವಾನಿಸಿ ಔತಣ ನೀಡುತ್ತಾರೆ. ಕುಟುಂಬಸ್ಥರ ಮನೆಗೆ ತೆರಳಿ ಪರಸ್ಪರ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಕೌಟುಂಬಿಕ ಸಂಬAಧವನ್ನು ಮತ್ತಷ್ಟು ಬಲಪಡಿಸುವಲ್ಲಿ ಸಹಕಾರಿ ಆಗುತ್ತಾರೆ. ಸರ್ವರಿಗೂ ಈದುಲ್ಫಿತರ್ನ ಶುಭಾಶಯಗಳು.
-ಯಮ್ಮಿ.