ಸಿದ್ದಾಪುರ, ಏ. ೩೦: ಸಿದ್ದಾಪುರ ಗ್ರಾ.ಪಂ. ಮಾಸಿಕ ಸಭೆಯಲ್ಲಿ ತೆರೆದ ಬಾವಿ ಪುನರ್ ನಿರ್ಮಾಣ ಮಾಡದೇ ಅಧ್ಯಕ್ಷರು ನಿರ್ಲಕ್ಷö್ಯ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯರುಗಳು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಹೆಚ್.ಎಂ. ಪಳನಿಸ್ವಾಮಿ ಮಾತನಾಡಿ ಗ್ರಾ.ಪಂ. ಕಚೇರಿ ಎದುರು ಪಶುವೈದ್ಯ ಆಸ್ಪತ್ರೆಯ ಬಳಿ ಇರುವ ಸಾರ್ವಜನಿಕ ಕುಡಿಯುವ ನೀರಿನ ತೆರೆದ ಬಾವಿಯನ್ನು ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳ ಗಮನಕ್ಕೆ ತರದೇ ಮುಚ್ಚಿಸಿದ್ದರು. ಈ ಬಗ್ಗೆ ಕಳೆದ ಮಾಸಿಕ ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆಸಿ ಸದಸ್ಯರುಗಳು ಬಾವಿಯನ್ನು ಪುನರ್ ನಿರ್ಮಾಣ ಮಾಡುವಂತೆ ಒತ್ತಾಯಪಡಿಸಿದ್ದರು. ಆ ಸಂದರ್ಭ ಅಧ್ಯಕ್ಷೆ ಬಾವಿ ಪುನರ್ ನಿರ್ಮಾಣ ಮಾಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಇದೀಗ ಒಂದೂವರೆ ತಿಂಗಳು ಕಳೆದರೂ ಕೂಡ ಬಾವಿಯನ್ನು ನಿರ್ಮಾಣ ಮಾಡದೇ ನಿರ್ಲಕ್ಷö್ಯ ಧೋರಣೆಯನ್ನು ತಾಳಿರುವುದು ಸರಿಯಾದ ಕ್ರಮವಲ್ಲವೆಂದು ಪಳನಿಸ್ವಾಮಿ ಹಾಗೂ ಇತರ ಕೆಲವು ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪಕ್ಷಾತೀತವಾಗಿ ಸದಸ್ಯರುಗಳು ಅಧ್ಯಕ್ಷರ ಮೇಲೆ ಮುಗಿಬಿದ್ದು ತರಾಟೆಗೆ ತೆಗೆದುಕೊಂಡರು. ಅಲ್ಲದೇ ತೆರೆದ ಬಾವಿಯನ್ನು ಅದೇ ಜಾಗದಲ್ಲಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಈ ವಿಚಾರದ ಬಗ್ಗೆ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದು ಕಿರುಚಾಟ, ಮಾತಿನ ಚಕಮಕಿ ನಡೆಯಿತು. ಸದಸ್ಯೆ ಪ್ರೇಮಾ ಮಾತನಾಡಿ ನಾವುಗಳು ಮಾಸಿಕ ಸಭೆಯಲ್ಲಿ ಮಾತನಾಡಿದ ಗಂಭೀರ ವಿಚಾರಗಳನ್ನು ಗ್ರಾ.ಪಂ ಅಧ್ಯಕ್ಷೆ ಅಧಿಕಾರಿಗಳಿಗೆ ಹೇಳಿ ಅದನ್ನು ತಿರುಚುತ್ತಿದ್ದು, ಸದಸ್ಯರ ಮಾತಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೇ ಗ್ರಾ.ಪಂ ಅಧಿಕಾರಿಗಳಿಗೆ ಒತ್ತಡ ಹೇರಿ ತಮಗೆ ಬಂದAತೆ ನಿರ್ಣಯ ಪುಸ್ತಕದಲ್ಲಿ ನಿರ್ಣಯಗಳನ್ನು ಬರೆಸುತ್ತಿದ್ದಾರೆ ಎಂದು ದೂರಿದರು. ನಂತರ ಪಕ್ಷಾತೀತವಾಗಿ ಸದಸ್ಯರೆಲ್ಲರೂ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಅವಾಚ್ಯ ಶಬ್ದಗಳ ಬಳಕೆ!

ತೆರೆದ ಬಾವಿಯ ಪುನರ್ ನಿರ್ಮಾಣ ಮಾಡಲು ಒತ್ತಾಯಿಸುವ ಸಂದರ್ಭ ಸದಸ್ಯರುಗಳು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ವೈಯಕ್ತಿಕ ನಿಂದನೆಗಳು ಹಾಗೂ ಮಾತಿನ ಚಕಮಕಿಯೊಂದಿಗೆ ಅಭಿವೃದ್ಧಿಪರ ಚರ್ಚಿಸದೇ ಗೊಂದಲದ ಗೂಡಾಗಿ ಸಭೆ ಮುಕ್ತಾಯಗೊಂಡಿತು.

ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಮಹೇಶ್ ಕುಮಾರ್, ಪಿಡಿಓ ಮನ್ ಮೋಹನ್, ಕಾರ್ಯದರ್ಶಿ ಮೋಹನ್ ಹಾಜರಿದ್ದರು.