ಶನಿವಾರಸಂತೆ, ಏ. ೩೦: ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಮಲೇರಿಯಾ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯ ಎಂದು ಆಲೂರು-ಸಿದ್ದಾಪುರ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಅಭಿಪ್ರಾಯಪಟ್ಟರು.

ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಪ್ರಯುಕ್ತ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವೊಂದು ಕಾಯಿಲೆಗಳನ್ನು ಕೇವಲ ಮಾಹಿತಿ ಮೂಡಿಸುವುದರಿಂದ ನಿಯಂತ್ರಣಗೊಳಿಸಲು ಸಾಧ್ಯವಾಗದಿದ್ದರೂ ಮಲೇರಿಯಾದಂತಹ ಕಾಯಿಲೆಯನ್ನು ಜನರಲ್ಲಿ ಜಾಗೃತಿ ಮೂಡಿಸುವುದರಿಂದ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ಸೊಳ್ಳೆಗಳ ಸಂತನೋತ್ಪತ್ತಿ, ಸೊಳ್ಳೆಗಳಲ್ಲಿರುವ ಮಲೇರಿಯಾ ರೋಗಾಣು, ಮಲೇರಿಯಾ ಹರಡುವಿಕೆ ಒಳಗೊಂಡ ವೀಡಿಯೋ ತುಣುಕುಗಳನ್ನು ಬಿತ್ತರಿಸುವ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್‌ಕುಮಾರ್, ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.