ಗೋಣಿಕೊಪ್ಪ ವರದಿ, ಏ. ೩೦: ಪ್ರಕೃತಿಯ ಮುನಿಸಿಗೆ ಮಾನವ ಭೂಮಿಯ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಕಾರಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎನ್. ಸುಬ್ರಮಣ್ಯನ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳಂತ ಪ್ರದೇಶವನ್ನು ಸಂರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು. ಅದರಲ್ಲೂ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಅಧಿಕಾರಿಗಳಾಗಿ ಭೂಮಿಯ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಸಲಹೆ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬೀನಾ ಬೇಗಂ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು. ಪೊನ್ನಂಪೇಟೆ ನ್ಯಾಯಾಧೀಶ ಬಿ. ಗಿರಿಗೌಡ, ವಕೀಲ ಸಂಘದ ಅಧ್ಯಕ್ಷ ಕಳಕಂಡ ಡಿ. ಮುತ್ತಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬೀನಾ ಬೇಗಂ, ಅರಣ್ಯ ವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಇದ್ದರು.