ಚೆಟ್ಟಳ್ಳಿ, ಏ. ೩೦: ಕಳೆದೆರಡು ವರ್ಷಗಳ ಬಾರೀ ಮಳೆಗೆ ಕುಸಿದ ಅಬ್ಯಾಲ ರಸ್ತೆಗೆ ಗೇಬಿಯನ್ ಮಾದರಿಯ ತಡೆಗೋಡೆ ನಿರ್ಮಿಸಲಾಗುತ್ತಿದೆ. ಹಲವೆಡೆ ನಿರ್ಮಿಸಿದ ಉಳಿದ ಕಾಂಕ್ರೀಟ್ ತಡೆಗೋಡೆಗಳು ದಿನೇದಿನೇ ಬಿರುಕುಬಿಟ್ಟಿದ್ದು ಮುಂದಿನ ದಿನಗಳಲ್ಲಿ ಕುಸಿದುಬೀಳುವ ಹಂತದಲ್ಲಿದ್ದು ಪರಿಶೀಲಿಸಿ ಕ್ರಮಕೈಗೊಳ್ಳಲು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರುಸಲ್ಲಿಸಿದ್ದಾರೆ.
ಗೇಬಿಯನ್‌ತಡೆಗೋಡೆ ಎಂಬ ಪರ್ಯಾಯ ವ್ಯವಸ್ಥೆ...
ಬರೆ ಕುಸಿಯುವ ಜಾಗದಲ್ಲಿ ಕಬ್ಬಿಣದ ಬಲೆಗಳನ್ನು ಜೋಡಿಸಿ ಅದರೊಳಗೆ ಕಲ್ಲುಗಳನ್ನು ತುಂಬಿ ಮೆಟ್ಟಿಲುಗಳಂತೆ ಹಂತಹAತವಾಗಿ ಏರಿಸಿ ಬಟ್ಟೆಯ ಪರದೆಯನ್ನಿಟ್ಟು ಮಣ್ಣನ್ನು ತುಂಬಲಾಗುವುದು. ಮಳೆನೀರು ಗೇಬಿಯನ್ ತಡೆಗೋಡೆಯ ಮೂಲಕ ಹರಿಯುವುದು. ಇಂತಹ ವ್ಯವಸ್ಥೆಯನ್ನು ಕೊಡಗಿನ ಮಾಕುಟ್ಟರಸ್ತೆಯಲ್ಲಿ ಹಾಗೂ ಒಂದೆರಡು ಕಡೆ ಬರೆಕುಸಿಯುವ ಜಾಗದಲ್ಲಿ ಮಾಡಲಾಗಿದೆ.
ಅದೇರೀತಿ ಚೆಟ್ಟಳ್ಳಿ-ಮಡಿಕೇರಿ ರಸ್ತೆಯಲ್ಲಿ ಕಳಪೆ ತಡೆಗೋಡೆ ನಿರ್ಮಾಣಹಂತದಲ್ಲೇ ಕುಸಿದ ಪರಿಣಾಮ ಅದೇ ಜಾಗದಲ್ಲಿ ಕೇರಳದ ಗುತ್ತಿಗೆದಾರರಿಂದ ಗೇಬಿಯನ್ ತಡೆಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಬಿರುಕು ಬಿಡುತ್ತಿರುವ ಉಳಿದ ತಡೆಗೋಡೆಗಳು...
ಒಂದು ಕಳಪೆ ತಡೆಗೋಡೆ ಕಾಮಗಾರಿಯ ಹಂತದಲ್ಲಿ ಬಿದ್ದರೆ ಇನ್ನುಳಿದ ಕಾಂಕ್ರೀಟ್ ತಡೆಗೋಡೆಗಳೆಲ್ಲ ದಿನೇದಿನೇ ಬಿರುಕುಬಿಡತೊಡಗಿದೆ. ಚೆಟ್ಟಳ್ಳಿ ಸಮೀಪ ಅಬ್ಯಾಲದ ತಡೆಗೋಡೆಗಳು ಕಳಪೆಯಾದ ಬಗ್ಗೆ ಗ್ರಾಮಸ್ಥರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಂಜಿನಿಯರ್‌ಗಳಿಗೆ ಹಾಗೂ ಸಂಬAಧಪಟ್ಟ ಗುತ್ತಿಗೆದಾರರಿಗೆÀ ಶಾಸಕರಾದ ಅಪ್ಪಚ್ಚುರಂಜನ್ ಅವರು ಕಾಮಗಾರಿಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ.
ಬರೆ ಜರಿದು ನಷ್ಟಗೊಂಡ ತೋಟದ ಮಾಲೀಕರು ಹಾಗೂ ಸ್ಥಳೀಯರು ರಸ್ತೆ ಹಾಗೂ ಕಳಪೆಯಾದ ತಡೆಗೋಡೆ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಈವರೆಗೆ ಪರಿಶೀಲನೆ ನಡೆದಿಲ್ಲ.
ಕಳಪೆ ಕಾಮಗಾರಿಗೆ ಕಾರಣ ಕರ್ತರಾದವರ ಬಗ್ಗೆ ಕ್ರಮಕೈಗೊಳ್ಳದೆ ಇರುವ ಬಗ್ಗೆ ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
- ಪುತ್ತರಿರ ಕರುಣ್ ಕಾಳಯ್ಯ