ಸಿದ್ದಾಪುರ, ಏ. ೩೦: ಕರಡಿಗೋಡು ಗ್ರಾಮದಲ್ಲಿ ಮುಂದುವರಿದಿರುವ ಕಾಡಾನೆ ಹಾವಳಿ ಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕರಡಿಗೋಡು ಗ್ರಾಮದ ಹೇರೂರು, ಚಿಕ್ಕನಹಳ್ಳಿ, ಭುವನ ಹಳ್ಳಿ, ಟೀಕ್‌ವುಡ್ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ೧೦ಕ್ಕೂ ಅಧಿಕ ಕಾಡಾನೆಗಳು ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ರಾತ್ರಿ ಸಮಯದಲ್ಲಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿವೆ. ಇದರಿಂದಾಗಿ ಕಾಫಿ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಸಮಸ್ಯೆ ಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ದಿನನಿತ್ಯ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳು ಮುಖ್ಯ ರಸ್ತೆಗಳನ್ನು ದಾಟಿ ಕಾಫಿ ತೋಟಕ್ಕೆ ನುಸುಳುತ್ತಿದೆ. ಕೆಲವು ಕಾಡಾನೆಗಳು ಕಾಫಿ ಬೆಳೆಗಾರರ ಮನೆಯ ಸುತ್ತಲೂ ಓಡಾಡುತ್ತಾ ಹೂಕುಂಡಗಳನ್ನು ನಾಶಗೊಳಿಸುತ್ತಿವೆ. ಅಲ್ಲದೇ ಕೃಷಿ-ಫಸಲುಗಳನ್ನು ತುಳಿದು ತಿಂದು ಹಾನಿಗೊಳಿಸುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.