ಕುಶಾಲನಗರ, ಏ. ೨೯: ಕುಶಾಲನಗರ ತಾಲೂಕು ಮಾದಾಪಟ್ಟಣ ಗ್ರಾಮದಲ್ಲಿ ನಿರ್ಮಾಣವಾಗಿರುವ ಶ್ರೀ ಕಾಶಿ ವಿಶ್ವನಾಥ ಮತ್ತು ಶ್ರೀ ಜೋಡಿ ಬಸವೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಮತ್ತು ಸ್ಥಿರಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಕುಂಭಾಬಿಷೇಕ ಸಮಾರಂಭ ಮೇ ೪ ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ಅಧ್ಯಕ್ಷರಾದ ಎಂ. ಎಸ್ ನಾಗೇಶ್ ತಿಳಿಸಿದ್ದಾರೆ.
ಅವರು ಕುಶಾಲನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಸುಮಾರು ರೂ. ೬೫ ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮೂಲಕ ನಿರ್ಮಾಣಗೊಂಡಿರುವ ದೇವಾಲಯ ದಲ್ಲಿ ಮೇ ೪ ರಿಂದ ವಿಶೇಷ ಪೂಜಾ ವಿಧಿವಿಧಾನಗಳು ಜರುಗಲಿವೆ. ಮೇ ೬ ರಂದು ದೇವಾಲಯ ಉದ್ಘಾಟನೆ ಗೊಳ್ಳಲಿದೆ ಎಂದು ತಿಳಿಸಿದರು.
ಕಾವೇರಿ ತೀರದಲ್ಲಿರುವ ಈ ದೇವಾಲಯದಲ್ಲಿ ಶ್ರೀ ಕಾಶಿ ವಿಶ್ವನಾಥ ಮತ್ತು ಜೋಡಿ ಬಸವೇಶ್ವರ ಸ್ಥಿರ ಬಿಂಬ ದೇವಾಲಯ ಪ್ರತಿಷ್ಠಾಪನ ಕಾರ್ಯಕ್ರಮ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಸಹಕಾರ್ಯದರ್ಶಿ ಬಿ.ವಿ. ಸತೀಶ್ ಕುಂದರ್, ಮೂರು ದಿನಗಳ ಕಾರ್ಯಕ್ರಮಗಳ ವಿವರ ಒದಗಿಸಿದರು.
ಮೇ ೪ ರಂದು ವೇದಘೋಷ, ಗಂಗಾಪೂಜೆ, ಗೋಪೂಜೆ, ಯಾಗ ಶಾಲಾ ಪ್ರವೇಶ ಗಣಪತಿ ಪೂಜೆ ಮತ್ತಿತರ ಹೋಮ ಹವನಾದಿಗಳು ನಂತರ ಮಂಗಳಾರತಿ ನಡೆದು ತೀರ್ಥ ಪ್ರಸಾದ ವಿನಿಯೋಗ ನಡೆಯುವುದು. ಸಂಜೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದರು. ಮೇ ೫ ರಂದು ಬೆಳಗ್ಗೆ ಕಲಶಾರಾಧನೆ ಹೋಮ ಮಂಗಳಾರತಿ ನಂತರ ತೀರ್ಥ ಪ್ರಸಾದ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ. ಮೇ ೬ ರಂದು ಪ್ರತಿಷ್ಠಾಪನೆ ಕಲಶಾರಾಧನೆ ಮತ್ತಿತರ ಕೈಂಕರ್ಯ ಗಳು ತುಮಕೂರು ವೇದ ಬ್ರಹ್ಮ ಶ್ರೀ ಕರಣೀಕ ನರಹರಿ ಶರ್ಮ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ಒದಗಿಸಿದರು.
ಮೇ ೬ರಂದು ನಡೆಯುವ ಜೀರ್ಣೋದ್ಧಾರ ಸ್ಥಿರ ಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಕುಂಭಾಬಿಷೇಕ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮಭೂಷಣ ಡಾ ವೀರೇಂದ್ರ ಹೆಗ್ಗಡೆ ಅವರ ದಿವ್ಯಸಾನಿಧ್ಯದೊಂದಿಗೆ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ಕೊಡ್ಲಿಪೇಟೆ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿಗಳು, ತಪೋವನ ಕ್ಷೇತ್ರದ ಕ್ಷೇತ್ರದ ಶಿವಲಿಂಗ ಸ್ವಾಮೀಜಿಗಳು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಗಳು ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿಗಳು, ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿಗಳು ಹಾಗೂ ದೇವಸ್ಥಾನ ಕಟ್ಟಡ ಮಾರ್ಗದರ್ಶಕರಾದ ಬಿ. ಆರ್ ಉಮೇಶ್ ಪಾಲ್ಗೊಳ್ಳುವರು.ದೇವಾಲಯದ ಉದ್ಘಾಟನೆ ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರು ನೆರವೇರಿಸಲಿದ್ದಾರೆ ದೇವಾಲಯ ಸಮಿತಿ ಅಧ್ಯಕ್ಷರಾದ ಎಂ.ಎಸ್. ನಾಗೇಶ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಒದಗಿಸಿದರು. ಗೋಷ್ಠಿಯಲ್ಲಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಗೌರವ ಕಾರ್ಯದರ್ಶಿ ಹೆಚ್.ಡಿ. ನಂದಕುಮಾರ್ ಖಜಾಂಚಿ ಪಿ.ವಿ. ವಿನೋದ್, ಎಂ.ಕೆ. ಪ್ರವೀಣ್ ಕುಮಾರ್ ಇದ್ದರು.