ಮಡಿಕೇರಿ, ಏ. ೨೯: ಭಾಗಮಂಡಲ ಸಮೀಪದ ಸಣ್ಣಪುಲಿಕೋಟು ಗ್ರಾಮದಲ್ಲಿರುವ ಕಡೋಡಿ ಶ್ರೀ ಮಹಾವಿಷ್ಣು ದೇವರ ಹಬ್ಬ ಮೊನ್ನೆ ನೆರವೇರಿದೆ. ಹಬ್ಬದ ಸಂದರ್ಭದಲ್ಲಿ ಕೆಲವರು ಗ್ರಾಮ ಪಂಚಾಯಿತಿಯ ಅನುಮತಿಯೊಂದಿಗೆ ಐಸ್‌ಕ್ರೀಂ ಮಾರಾಟ ಮಾಡುವ ಅಂಗಡಿಗಳನ್ನು ತೆರೆದಿದ್ದರು. ಕೆಲವರು ವಾಹನಗಳಲ್ಲೂ ಐಸ್‌ಕ್ರೀಂಗಳನ್ನು ಮಾರಾಟ ಮಾಡಿದ್ದಾರೆ. ಇಂತಹ ಅಂಗಡಿ, ವಾಹನಗಳಿಂದ ಐಸ್‌ಕ್ರೀಂಗಳನ್ನು ಪಡೆದು ತಿಂದಿರುವ ಮಕ್ಕಳು ಇದೀಗ ರಕ್ತ ಭೇದಿಯೊಂದಿಗೆ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಬಗ್ಗೆ ತಿಳಿದುಬಂದಿದೆ.

ಬಹಳಷ್ಟು ಮಕ್ಕಳು ಮನೆಯಲ್ಲಿಯೇ ನರಳುತ್ತಿದ್ದರೆ, ಇನ್ನೂ ಕೆಲವರು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆರೋಗ್ಯ ಇಲಾಖೆ ಅಥವಾ ಪಂಚಾಯಿತಿಯವರು ಪರಿಶೀಲನೆ ಮಾಡದೆ ಐಸ್‌ಕ್ರೀಂ ಮಾರಾಟಕ್ಕೆ ಅನುವುಮಾಡಿಕೊಟ್ಟಿರುವುದು ಈ ರೀತಿಯ ಅವಾಂತರಕ್ಕೆ ಕಾರಣವಾಗಿದೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ. ಐಸ್‌ಕ್ರೀಂ ಮಾರಾಟ ಮಾಡಿದ ಅಂಗಡಿ, ವಾಹನಗಳವರ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.