ಮುಸ್ಲಿಂ ಬಾಂಧವರ ಒಂದು ತಿಂಗಳ ವ್ರತಾಚರಣೆ ಮುಕ್ತಾಯಗೊಂಡಿದ್ದು, ಈದುಲ್ ಫಿತರ್ ಎಂಬ ಸಂಭ್ರಮದ ರಂಝಾನ್ ಹಬ್ಬ ಮತ್ತೆ ಬಂದಿದೆ. ಕಳೆದ ಮೂವತ್ತು ದಿನಗಳ ಕಾಲ ಹಗಲು ಹನ್ನೆರಡು ಗಂಟೆಗಳ ಕಾಲ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ರಾತ್ರಿ ವೇಳೆ ವಿಶೇಷ ತರಾವೀ ನಮಾಝ್‌ನಲ್ಲಿ ಪಾಲ್ಗೊಂಡು ಅಧ್ಯಾತ್ಮಿಕತೆಯಲ್ಲಿ ಮುಳುಗಿದ ಮುಸ್ಲಿಮರು ಇದೀಗ ಈದುಲ್ ಫಿತರ್‌ನ ಸಡಗರದಲ್ಲಿದ್ದಾರೆ.
ಈದ್‌ನ ದಿನ ಯಾರೊಬ್ಬರೂ ಕೂಡ ಹಸಿದಿರಬಾರದು ಎಂದು ಧರ್ಮವೂ ‘ಫಿತರ್ ಝಕಾತ್’ ಎಂಬ ಧ್ಯಾನದಾನವನ್ನು ಅರ್ಹರಿಗೆ ನೀಡುವಂತೆ ಆದೇಶಿಸಿದೆ. ಅಂದು ಮನೆಯ ಯಜಮಾನ ತನ್ನ ಹಾಗೂ ಹೆಂಡತಿ ಮಕ್ಕಳ ಪಾಲಿನ ಆಹಾರ ಧಾನ್ಯವನ್ನು ನೀಡುತ್ತಾನೆ. ಹಬ್ಬದ ದಿನ ಮುಸ್ಲಿಂ ಬಾಂಧವರು ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ವಿಶೇಷ ನಮಾಝ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ತಮ್ಮ ನೆಂಟರಿಷ್ಟರ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಕೌಟುಂಬಿಕ ಸಂಬAಧವನ್ನು ಬಲಪಡಿಸುತ್ತಾರೆ. ಅಂದು ಎಲ್ಲರ ಮನೆಗಳಲ್ಲೂ ಮಾಂಸದೂಟದ ವಿಶೇಷ ಅಡುಗೆ ತಯಾರಿಸಲಾಗುತ್ತದೆ. ಸಂಭ್ರಮಾಚರಣೆಯಲ್ಲೂ - ಸಂತಾಪದಲ್ಲೂ ಇಸ್ಲಾಂ ಧರ್ಮವೂ ಆರಾಧನೆಗೆ - ಪ್ರಾರ್ಥನೆಗೆ ಒತ್ತು ನೀಡಿದೆ. ಹಬ್ಬದ ದಿನ ಅಲ್ಲಾಹು ಅಕ್ಬರ್ ಎಂಬ ದೈವ ಕೀರ್ತನೆ ಎಲ್ಲೆಡೆ ಮೊಳಗುತ್ತದೆ. ಪ್ರಸ್ತುತ ಈದುಲ್ ಫಿತರ್ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ.
- ಸಿ.ಎ. ಅಶ್ರಫ್, ಚೆಯ್ಯಂಡಾಣೆ.