ಪೊನ್ನಂಪೇಟೆ, ಏ. ೨೯: ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿಯ ನಾಗರ ಹೊಳೆ ಅರಣ್ಯ ವ್ಯಾಪ್ತಿಯ ಬಾಳೆಕೋವು ಹಾಡಿಯಲ್ಲಿ ಅರಣ್ಯ ಹಕ್ಕುಗಳ ಗ್ರಾಮಸಭೆಯನ್ನು ಹಾಡಿ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಬಿ.ಸಿ. ಕಾಳ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ಹಾಡಿಯಲ್ಲಿ ವಾಸವಾಗಿರುವ ೨೦ ಕುಟುಂಬಗಳಿಗೆ ವೈಯಕ್ತಿಕ ಹಕ್ಕು ಅಡಿಯಲ್ಲಿ ವಾಸಕ್ಕಾಗಿ ೦.೮ ಸೆಂಟ್ ಜಾಗವನ್ನು ಗುರುತಿಸಿ ಹಕ್ಕುಪತ್ರ ನೀಡಲಾಗಿದ್ದು, ಬೇಸಾಯಕ್ಕಾಗಿ ಜಮೀನು ನೀಡದೆ ಅನ್ಯಾಯ ಮಾಡಿರುವುದಾಗಿ ತಿಳಿಸಿ, ಕಾನೂನಿನ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ತಲಾ ೫ ಎಕರೆ ಜಮೀನು ನೀಡುವಂತೆ ಒತ್ತಾಯಿಸಲಾಯಿಸಲು ಗ್ರಾಮ ಸಭೆಯಲ್ಲಿ ಅನುಮೋದಿಸಲಾಯಿತು.

ಪ್ರತಿ ವರ್ಷವು ಕಾಡಿನ ಒಳಗೆ ಹೋಗಿ ಕಿರು ಅರಣ್ಯ ಉತ್ಪನ್ನವನ್ನು ಸಂಗ್ರಹಿಸುತ್ತಿದ್ದು, ಈ ವರ್ಷದಲ್ಲಿ ಜೇನು ತುಪ್ಪ ಸಂಗ್ರಹಿಸಲು ಮೇ ತಿಂಗಳಿAದ ಜೂನ್‌ವರೆಗೂ ಹಾಡಿಯ ನಿವಾಸಿಗಳು ತೆರಳುವ ಮುನ್ನ ಗ್ರಾಮಸಭೆಯ ಅನುಮೋದನೆ ಪಡೆದು ಪರವಾನಗಿಯನ್ನು ಪಡೆದುಕೊಂಡು ತೆರಳಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಯಿತು. ಅರಣ್ಯ ಹಕ್ಕು ಕಾಯ್ದೆ ೨೦೦೬ ಪ್ರಕಾರ ಅರಣ್ಯ ಮತ್ತು ಜೀವ ವೈವಿಧ್ಯತೆಯ ಸಂರಕ್ಷಣೆ, ಬಳಕೆ, ನಿರ್ವಹಣೆ ಹಾಗೂ ಪುನರುತ್ಪಾದಿಸು ವಿಕೆ ಜವಾಬ್ದಾರಿಯ ಹೊಣೆಯನ್ನು ಗ್ರಾಮಸಭೆಗೆ ನೀಡಿರುವುದರಿಂದ ಎಲ್ಲರೂ ಚಾಚುತಪ್ಪದೆ ನಿಯಮ ಪಾಲಿಸಬೇಕು ಎಂದರು.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಾಗರಹೊಳೆ ಅರಣ್ಯ ಕಚೇರಿಯ ಮುಂದೆ ನಡೆದ ಜಮ್ಮ- ಪಾಳೆ ಹಕ್ಕೊತ್ತಾಯ ಹೋರಾಟದಲ್ಲಿ ಜಿಲ್ಲಾಧಿಕಾರಿಗಳು ಎರಡು ತಿಂಗಳಲ್ಲಿ ಸಮುದಾಯದ ಹಕ್ಕು ಮತ್ತು ವೈಯಕ್ತಿಕ ಹಕ್ಕು ಪತ್ರ ನೀಡುವುದಾಗಿ ಮತ್ತು ಮೂಲ ಸೌಕರ್ಯವಾದ ಮನೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಹಕ್ಕುಪತ್ರ ನೀಡದೆ ಇರುವುದನ್ನು ಗಮನಿಸಿ ಗ್ರಾಮಸಭೆಯಲ್ಲಿ ನಿರ್ಣಯವನ್ನು ಕೈಗೊಂಡು ಹೋರಾಟವನ್ನ ಮುಂದುವರೆಸು ವುದಾಗಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿಯ ಸದಸ್ಯರಾದ ಬಿ.ಕೆ.ಕಾಳ ಮಾತನಾಡಿ, ಹಾಡಿಯಲ್ಲಿ ವಾಸ ವಾಗಿರುವ ಎಂಟು ಕುಟುಂಬಗಳಿಗೆ ಸರಿಯಾದ ರೀತಿಯ ಗುಡಿಸಲು ಗಳಿಲ್ಲದೆ ಹಲವು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಹಕ್ಕುಪತ್ರವು ಕಳೆದ ಎರಡು ತಿಂಗಳ ಹಿಂದೆ ಸಿಕ್ಕಿದ್ದು, ಸಾಂಪ್ರದಾಯಿಕವಾಗಿ ಗುಡಿಸಲನ್ನು ನಿರ್ಮಿಸಿಸಲು ಗ್ರಾಮಸಭೆಯ ಅನುಮತಿ ನೀಡುವಂತೆ ಪ್ರಸ್ತಾಪಿಸಿದರು. ಅದಕ್ಕೆ ಚರ್ಚಿಸಿ ಗ್ರಾಮಸಭೆಯು ಅನುಮೋದಿಸಿತು.

ಮಹಿಳಾ ಸದಸ್ಯರಾದ ಜೆ.ಆರ್. ಅರ್ಚನ ಮಾತನಾಡಿ, ಹಾಡಿಯು ನಾಗರಹೊಳೆಯ ಮುಖ್ಯ ಪ್ರವೇಶ ದ್ವಾರದ ಸಮೀಪದಲ್ಲಿದ್ದು ಅರಣ್ಯ ವನ್ನು ವೀಕ್ಷಿಸಲು ಬರುವ ಪ್ರವಾಸಿಗರು ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ಬ್ಯಾಗ್, ಜ್ಯೂಸ್ ಬಾಟಲಿಗಳು, ಚಿಕ್ಕ ಮಕ್ಕಳಿಗೆ ಧರಿಸುವ ಪ್ಯಾಂಪರ್ಸ್ ಗಳನ್ನು ಅರಣ್ಯದ ಒಳಗೆ ಮತ್ತು ಅರಣ್ಯದ ಅಂಚಿನಲ್ಲಿ ಬಿಸಾಕಿ ಮಾಲಿನ್ಯ ಮಾಡುತ್ತಿದ್ದು. ಇದರ ಬಗ್ಗೆ ಗ್ರಾಮಸಭೆಯು ಅರಣ್ಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ನಾಗರ ಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹಾಡಿಗಳಲ್ಲಿ ವಾಸ ಮಾಡುತ್ತಿರುವ ನಮಗೆ ರಾತ್ರಿ ವೇಳೆ ಸಂಚರಿಸಲು ಅರಣ್ಯ ಅಧಿಕಾರಿಗಳಿಂದ ತೊಂದರೆಯಾಗುತ್ತಿದೆ. ಮಡಿಕೇರಿಯಲ್ಲಿ ೩ ಗಂಟೆಗೆ ಸಭೆ ಇರುವಾಗ ಸಭೆಯನ್ನು ಮುಗಿಸಿ ಹಾಗೂ ತಾಲೂಕು ಕಚೇರಿ ಕೆಲಸ ಮತ್ತಿತರ ಇಲಾಖೆ ಕೆಲಸಗಳನ್ನು ಮುಗಿಸಿಕೊಂಡು ನಾವುಗಳು ನಮ್ಮ ಹಾಡಿಗೆ ಬಂದು ತಲುಪಲು ರಾತ್ರಿ ವೇಳೆ ಆಗುತ್ತದೆ. ಆ ಸಮಯದಲ್ಲಿ ಅರಣ್ಯ ಅಧಿಕಾರಿಗಳು ನಮ್ಮನ್ನು ಗೇಟ್ ನಿಂದ ಒಳಗೆ ಬಿಡುವುದಿಲ್ಲ. ಆದ್ದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ನಾವುಗಳು ಕಾಡಿನಲ್ಲೇ ವಾಸ ಮಾಡುತ್ತಿ ರುವದರಿಂದ ಕಾಡಿನ ಪ್ರಾಣಿಗಳು ಯಾವ ಸಮಯದಲ್ಲಿ ಸಂಚರಿಸುತ್ತವೆ ಎಂಬುದು ನಮಗೆಲ್ಲರಿಗೂ ಅರಿವಿದೆ. ಆದ್ದರಿಂದ ರಾತ್ರಿ ವೇಳೆ ನಿಗದಿತ ಸಮಯದಲ್ಲಿ ಓಡಾಡಲು ಅವಕಾಶ ಕಲ್ಪಿಸಿ ಕೊಡುವ ಬಗ್ಗೆ ಅರಣ್ಯಧಿ ಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಬೇಕಿದೆ ಎಂದು ಪೊನ್ನಂಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಪ್ರಮುಖ ಶಿವು ಸಲಹೆ ನೀಡಿದರು.

ಸಭೆಯಲ್ಲಿ ನಾಗರಹೊಳೆ ಬುಡಕಟ್ಟು ಕೃಷಿಕರ ಸಂಘದ ಸದಸ್ಯರಾದ ಜೆ.ಎ. ಪುಟ್ಟಸ್ವಾಮಿ, ಗೋಣಿಗದ್ದೆ ಹಾಡಿಯ ಯಜಮಾನ ಕಾಳಪ್ಪರವರು, ಅರಣ್ಯ ಹಕ್ಕುಗಳ ಕಾನೂನು ಸಲಹೆಗಾರರಾದ ಜೆ.ಎ. ಶಿವು, ಬಾಳೆಕೋವು ಹಾಡಿ ಅರಣ್ಯ ಹಕ್ಕುಗಳ ಸಮಿತಿಯ ಕಾರ್ಯದರ್ಶಿ ಬಿ.ಕೆ. ಕಾಂತು ಹಾಗೂ ಹಾಡಿಯ ಎಲ್ಲ ವಯಸ್ಕ ಸದಸ್ಯರು ಭಾಗವಹಿಸಿದ್ದರು.