ಶನಿವಾರಸಂತೆ, ಏ. ೩೦: ಆರೋಗ್ಯ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕಿದ್ದು, ಜನರ ಆರೋಗ್ಯ ಸಮಸ್ಯೆ, ರೋಗ ಮತ್ತು ಅಡ್ಡಪರಿಣಾಮಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಆಲೂರು-ಸಿದ್ದಾಪುರ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣಾ ಹೇಳಿದರು.
ಸಮೀಪದ ಆಲೂರು-ಸಿದ್ದಾಪುರ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ನಡೆದ ಸಮುದಾಯ ಆರೋಗ್ಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಯಾನ್ಸರ್, ಬಿ.ಪಿ., ಶುಗರ್, ಟಿಬಿ ಇತ್ಯಾದಿ ರೋಗಗಳನ್ನು ತಡೆಗಟ್ಟುವ ಸಲುವಾಗಿ ಸಮುದಾಯ ಆರೋಗ್ಯ ಅಧಿಕಾರಿಗಳು ಗ್ರಾಮಗಳಲ್ಲಿ ಉತ್ತಮವಾಗಿ ಆರೋಗ್ಯ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು.
ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್‌ಕುಮಾರ್, ಆರೋಗ್ಯ ಕೇಂದ್ರಕ್ಕೆ ಒಳಪಡುವ ಆಲೂರು-ಸಿದ್ದಾಪುರ, ಮಾಲಂಬಿ, ಗಿರಿಜನ ಕಾಲೋನಿಯ ಉಪ ಆರೋಗ್ಯ ಕೇಂದ್ರ, ನಿಡ್ತ, ಅಂಕನಹಳ್ಳಿ, ಅಬ್ಬೂರುಕಟ್ಟೆ, ಗೋಣಿಮರೂರು, ಆಡಿನಾಡೂರು ಕೇಂದ್ರಗಳ ಅನೂಷ, ಸಿ.ಜಿ. ಭಾವನಾ, ಕೆ.ಆರ್. ಗಣೇಶ್, ಚಂದನಾ ಪಾಲ್ಗೊಂಡಿದ್ದರು.