ಗೋಣಿಕೊಪ್ಪ ವರದಿ, ಏ. ೨೯: ಅಮ್ಮ ಕೊಡವ ಕೌಟುಂಬಿಕ ಹೆಮ್ಮಚ್ಚಿಮನೆ ಕ್ರಿಕೆಟ್ ಟೂರ್ನಿಯನ್ನು ಮೇ ೬ ರಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮೈದಾನದಲ್ಲಿ ನಡೆಸಲು ಕೋತೂರು ಮಹಾದೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಖಿಲ ಅಮ್ಮಕೊಡವ ಸಮಾಜ ಮತ್ತು ಹೆಮ್ಮಚ್ಚಿಮನೆ ಕುಟುಂಬದ ಸದಸ್ಯರು ಪಾಲ್ಗೊಂಡು ಸೂಕ್ತ ಸಲಹೆ ನೀಡಿದರು. ಮೇ ೮ ರಂದು ಫೈನಲ್ ಪಂದ್ಯ ಮತ್ತು ಸಮಾರೋಪ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಉದ್ಘಾಟನೆ ಸಂದರ್ಭ ಪೊನ್ನಂಪೇಟೆ ಅಯ್ಯಪ್ಪ ದೇವಸ್ಥಾನದಿಂದ ಸಾಂಸ್ಕೃತಿಕ ಮೆರವಣಿಗೆ, ಮೈದಾನದಲ್ಲಿ ಉಮ್ಮತ್ತಾಟ್ ಪ್ರದರ್ಶನ ನೀಡಲಾಗುವುದು ಎಂದು ತಿಳಿಸಿದರು. ತಂಡಗಳ ನೋಂದಣಿಗೆ ತಾ. ೩೦ ರವರೆಗೆ ಅವಕಾಶ ನೀಡಲಾಗುವುದು. ಹೆಚ್ಚಿನ ತಂಡಗಳನ್ನು ಸೇರಿಸಿ ಜನಾಂಗದ ಒಗ್ಗಟ್ಟು ಪ್ರದರ್ಶನ ಮಾಡಲಾಗುವುದು. ಜನಾಂಗದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು, ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಪದಾಧಿಕಾರಿಗಳಾದ ಲೌಲಿ ನಂದ, ರಮ್ಯ ಧನು, ಹೆಮ್ಮಚ್ಚಿಮನೆ ಕುಟುಂಬ ಅಧ್ಯಕ್ಷ ಹೆಮ್ಮಚ್ಚಿಮನೆ ವಿಠಲ, ಹಿರಿಯರಾದ ರವಿ, ಅಯ್ಯಪ್ಪಮಯ್ಯ, ವಾಸುಮಯ್ಯ, ದಿನೇಶ್ ಇದ್ದರು.