ಶನಿವಾರಸಂತೆ, ಏ. ೩೦: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದಲ್ಲಿ ೨೦೦ ವರ್ಷಗಳ ಪುರಾತನ ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಲಿಂಗ ಹಾಗೂ ನಂದಿ ವಿಗ್ರಹ ಪ್ರತಿಷ್ಠಾಪನಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶ್ರವಣಬೆಳಗೊಳ ಹೊಸಕೊಪ್ಪಲು ಚೌಡೇಶ್ವರಿ ದೇವಿ ಶಕ್ತಿಮಠದ ಬಸವೇಶ್ವರ ಚೈತನ್ಯ ಮಹಾಸ್ವಾಮೀಜಿ ಹಾಗೂ ಕಲ್ಲಳ್ಳಿ ಮಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಗಣಹೋಮ ಮತ್ತು ರುದ್ರಹೋಮ ಪೂಜಾ ಕಾರ್ಯ ನೆರವೇರಿತು.

ಮಂಗಳ ವಾದ್ಯಗೋಷ್ಠಿಯೊಂದಿಗೆ ಗಂಗಾ ಕಲಶ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಸಾಗಿದರು. ಮಲ್ಲೇಶ್ವರ ಸ್ವಾಮಿಯ ಶಿಲನ್ಯಾಸಕ್ಕೆ ಶತ ರುದ್ರಾಭಿಷೇಕ ನೆರವೇರಿತು. ದೇವಸ್ಥಾನ ಜೀರ್ಣೋದ್ಧಾರ ದಾನಿ ನೀರುಗುಂದ ಗ್ರಾಮದ ಎನ್.ಎಂ. ಕುಮಾರ್ ದಂಪತಿ, ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.