ಗೋಣಿಕೊಪ್ಪ ವರದಿ, ಎ. ೩೦: ಹಾತೂರು ಸರ್ಕಾರಿ ಪ್ರೌಢಶಾಲೆಯ ಫೀ. ಮಾ. ಕೆ.ಎಂ ಕಾರ್ಯಪ್ಪ ಮೈದಾನದಲ್ಲಿ ಬಿರುವಾಸ್ ಗೋಣಿಕೊಪ್ಪ ಸಂಘಟನೆ ಆಯೋಜಿಸಿ ರುವ ಪೂಜಾರಿ ಪ್ರೀಮಿಯರ್ ಲೀಗ್ ಟೂರ್ನಿ ಲಾಂಛನವನ್ನು ಗೋಣಿಕೊಪ್ಪ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಅನಾವರಣಗೊಳಿಸಲಾಯಿತು.

ಸಂಘಟನೆ ಅಧ್ಯಕ್ಷ ಬಿ.ಆರ್. ರಂಜಿತ್‌ಕುಮಾರ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಬಿಡುಗಡೆ ಗೊಳಿಸಿದರು.

ಉಪಾಧ್ಯಕ್ಷ ಇಂದ್ರೇಶ್ ಪೂಜಾರಿ ಮಾತನಾಡಿ, ಮೊದಲ ವರ್ಷದ ಟೂರ್ನಿಯಾಗಿದ್ದು, ತಾ. ೬ ರಿಂದ ೮ರ ವರೆಗೆ ನಡೆಯಲಿದೆ. ೯ ತಂಡಗಳು ೩ ದಿನಗಳ ಕಾಲ ಪೈಪೋಟಿ ನಡೆಸುತ್ತವೆ ಎಂದರು.

ಮಡಿಕೇರಿ ರಾಯಲ್ ಪೂಜಾರಿ, ಗೋಣಿಕೊಪ್ಪ ಪ್ರೆöÊಡ್ ಪೂಜಾರಿ, ಸುಂಟಿಕೊಪ್ಪ ಬಿಲ್ಲವ ಪ್ಯಾಂಥರ್ರ್, ಅಮ್ಮತ್ತಿ ಚಂದನ್ ಬ್ರದರ್ಸ್, ಅಮ್ಮತ್ತಿ ಬಿಲ್ಲವ ವಾರಿಯರ್ಸ್, ವೀರಾಜಪೇಟೆ ಪೂಜಾರಿ ಹಿಟ್ಟರ್ಸ್, ಅಮ್ಮತ್ತಿ ಬಿಲ್ಲವ ಟೈಗರ್ಸ್, ಮಕ್ಕಂದೂರು ಟೈಟಾನ್ಸ್, ಅಮ್ಮತ್ತಿ ಗ್ರೀನ್ ಕೂರ್ಗ್ ತಂಡಗಳು ಪಾಲ್ಗೊಳ್ಳುತ್ತಿವೆ ಎಂದು ತಿಳಿಸಿದರು.

ಜನಾಂಗವನ್ನು ಒಗ್ಗೂಡಿಸಿ ಕೊಂಡು ಮುಂದುವರಿಯಲು ಸಾಮಾಜಿಕ ನೆಲೆಗಟ್ಟಿನಲ್ಲಿ ಟೂರ್ನಿ ಆಯೋಜಿಸಿದ್ದು, ವಿದ್ಯಾನಿಧಿ, ಉದ್ಯೋಗ ಮೇಳ, ತರಬೇತಿ ಶಿಬಿರ ಆಯೋಜಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಚಿಂತನೆ ಇದೆ ಎಂದರು.

ತಾ. ೬ ರಂದು ಬೆಳಿಗ್ಗೆ ೧೦ ಗಂಟೆಗೆ ಬಿಲ್ಲವ ಸಮಾಜ ಮಾಜಿ ಅಧ್ಯಕ್ಷ ರಾಜಾ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಕಾರ್ಕಳ ಭಾಗವಹಿಸಲಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‌ಸಿ ಸುಜಾ ಕುಶಾಲಪ್ಪ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಕಾರ್ಯದರ್ಶಿ ಮಹೇಶ್ ಕರ್ಕೆರ, ಖಜಾಂಚಿ ನಿತೇಶ್ ಪೂಜಾರಿ, ತೃತಿಕ್ ಪೂಜಾರಿ, ಪ್ರಚಾರ ಸಮಿತಿ ಸಂಚಾಲಕರಾದ ವಿಧ್ವಾನ್ ಪೂಜಾರಿ, ಜೀತು ಪೂಜಾರಿ, ಹರೀಶ್ ಪೂಜಾರಿ, ಮಹಿಳಾ ಘಟಕ ಅಧ್ಯಕ್ಷೆ ಬಿ.ಪಿ. ಸುಜಾತ ಇದ್ದರು.