ಕುಶಾಲನಗರ, ಏ. ೨೮: ಪ್ರತಿಯೊಂದು ಸಮುದಾಯ ಸಂಘ ಸಂಸ್ಥೆಗಳು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಘಟಕ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಹಾನಗಲ್ಲು ಶ್ರೀ ಕುಮಾರಸ್ವಾಮಿಗಳ ಮತ್ತು ಡಾ. ಶ್ರೀ ಶಿವಕುಮಾರಸ್ವಾಮಿ ಜಯಂತಿ ಮತ್ತು ಧಾರ್ಮಿಕ ಸಭೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ದೇಶದಲ್ಲಿ ವಿವಿಧ ಸಮುದಾಯಗಳಿದ್ದು, ಎಲ್ಲವೂ ಕೂಡ ಆರ್ಥಿಕವಾಗಿ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದ ಬೇಕಿದೆ. ವೀರಶೈವ ಲಿಂಗಾಯತ ಸಮುದಾಯದ ಕೊಡುಗೆಗೆ ಶತಮಾನಗಳ ಇತಿಹಾಸವಿದೆ. ಸಮಾನತೆಯ ಹರಿಕಾರ ಬಸವಣ್ಣ ಅವರ ಕಾಲಘಟ್ಟದಿಂದಲೂ ಸಮಾಜಕ್ಕೆ ಸಮುದಾಯದ ಸೇವೆ ಅಪಾರ ಎಂದು ಬಣ್ಣಿಸಿದರು.ಜಿಲ್ಲೆಯಲ್ಲಿ ಮಹಾಸಭಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿದ ಬೇಡಿಕೆಗೆ ಸ್ಪಂದಿಸಿದ ಶಾಸಕರು ೧೦ ಲಕ್ಷ ರೂಗಳ ಅನುದಾನ ಒದಗಿಸುವ ಭರವಸೆ ನೀಡಿದರು. ಹೆಚ್ಚಿನ ಅನುದಾನ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ.

ಕೊಡಗು ಜಿಲ್ಲಾ ವೀರಶೈವ ಸಮಾಜ ಬಾಂಧವರ ಸಂಖ್ಯೆ ಕಡಿಮೆ ಯಾದರೂ ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ತಲತಲಾಂತರಗಳಿAದ ನಡೆಸಿಕೊಂಡು ಬಂದ ಸಾಮಾಜಿಕ ಸೇವೆ ಇಡೀ ದೇಶಕ್ಕೆ ಮಾದರಿ. ಯಾವುದೇ ಸಮುದಾಯ, ಸಮಾಜ ಬಾಂಧವರು ತಮ್ಮ ಸೇವೆ ಹಾಗೂ ಕೊಡುಗೆಗಳ ಬಗ್ಗೆ ಅಭಿಮಾನ, ಗೌರವ ಹೊಂದುವುದು ಸಹಜವಾಗಬೇಕೆ ಹೊರತು ದುರಭಿಮಾನ, ಪ್ರತಿಷ್ಠೆ ಬೆಳೆಸಿಕೊಳ್ಳಬಾರದು ಎಂದರು. ಸಂಪನ್ಮೂಲ ವ್ಯಕ್ತಿ ಚಟ್ನಹಳ್ಳಿ ಮಹೇಶ್ ಪ್ರಧಾನ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಅಧ್ಯಕ್ಷರಾದ ಎಚ್.ವಿ.ಶಿವಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮುದಾಯ ಬಾಂಧವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾಜ ಬಾಂಧವರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇತ್ತೀಚೆಗೆ ರಚನೆಗೊಂಡ ಯುವ ಘಟಕಗಳ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು. ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ರಚಿಸಿದ ನೀನೊಲಿದರೆ ಎಂಬ ಕವನ ಸಂಕಲನವನ್ನು ಗಣ್ಯರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ,

ತೊರೆನೂರು ವಿರಕ್ತ ಮಠಾಧೀಶರಾದ ಶ್ರೀ ಮಲ್ಲೇಶ ಸ್ವಾಮೀಜಿ, ಶನಿವಾರಸಂತೆ ಮನೆಹಳ್ಳಿ ತಪೋವನ ಕ್ಷೇತ್ರದ ಮಹಾಂತ ಶಿವಲಿಂಗ ಸ್ವಾಮೀಜಿ, ಅ.ಭಾ.ವೀ. ಮಹಾಸಭಾದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರೇಣುಕ ಪ್ರಸನ್ನ, ಯುವ ಘಟಕ ರಾಜ್ಯ ಸಮಿತಿ ಅಧ್ಯಕ್ಷ ಮನೋಹರ ಅಬ್ಬಿಗೆರೆ, ಮಹಾಸಭಾ ರಾಜ್ಯ ಘಟಕದ ಕೈಗಾರಿಕೆ ಮತ್ತು ವಾಣಿಜ್ಯ ಘಟಕದ ಅಧ್ಯಕ್ಷ ಉಮೇಶ್ ಪಾಟೀಲ್, ಮಹಾಸಭಾದ ರಾಜ್ಯ ಸಮಿತಿ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಮಹಿಳಾ ಸಮಿತಿ ನಿರ್ದೇಶಕಿ ಮಹಿಮ ಸತೀಶ್, ಯುವ ಘಟಕ ನಿರ್ದೇಶಕ ವಿರೂಪಾಕ್ಷ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಮಮತ ಸತೀಶ್, ದಾನಿಗಳಾದ ಸುಶೀಲಮ್ಮ, ಎಂ.ಬಿ. ಬಸವರಾಜು ವೇದಿಕೆಯಲ್ಲಿದ್ದರು.

ಮಹಾಸಭಾದ ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಂ. ಕಾಂತರಾಜು, ಉಪಾಧ್ಯಕ್ಷ ಎಸ್.ಎಸ್. ಸುರೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಶಿವ ಮೂರ್ತಿ, ಖಜಾಂಚಿ ಹೆಚ್.ಪಿ. ಉದಯ ಕುಮಾರ್, ಕಾರ್ಯದರ್ಶಿ ಜೆ.ಸಿ. ಶೇಖರ್, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರುಗಳಾದ ಕೆ.ಬಿ.ಹಾಲಪ್ಪ, ಕೆ.ಎನ್. ಸಂದೀಪ್, ಮಧುಸೂದನ್, ಆದರ್ಶ್, ಪ್ರದೀಪ್, ಮುಖಂಡರಾದ ಪನ್ಯ ಶಂಕರ್, ಪಿ. ಮಹದೇವಪ್ಪ, ಜಲಜಾ ಶೇಖರ್, ಯು.ಎಂ. ಬಸವರಾಜು ಮತ್ತಿತರರು ಇದ್ದರು.