ಸೋಮವಾರಪೇಟೆ, ಏ. ೨೮: ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ಸದಾಚಾರ ಬೆಳೆಸಲು ವಚನಗಳು ಸಹಕಾರಿ ಎಂದು ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು.

ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಸೋಮವಾರಪೇಟೆ ವೀರಶೈವ ಸಮಾಜ ಹಾಗೂ ಅಕ್ಕನ ಬಳಗದ ಸಂಯುಕ್ತ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಪಟ್ಟಣದ ಮಹಿಳಾ ಸಮಾಜದಲ್ಲಿ ಏರ್ಪಡಿಸಲಾಗಿದ್ದ ವಚನಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.

೧೨ನೇ ಶತಮಾನದಲ್ಲಿ ಶಿವಶರಣರು ರಚಿಸಿದ ವಚನಗಳು ಇಂದಿಗೂ ಸ್ತುತ್ಯಾರ್ಹವಾಗಿದೆ. ಅದರಲ್ಲಿರುವ ಸದಾಚಾರಗಳನ್ನು ಅರಿತು ಅನುಸರಿಸಿದರೆ ಬಾಳು ಹಸನಾಗುತ್ತದೆ ಎಂದರು. ಜನಸಾಮಾನ್ಯರಿಗೆ ಅರ್ಥವಾಗುವಂತೆ ಆಡುಭಾಷೆಯಲ್ಲಿ ರಚಿಸಿರುವುದರಿಂದ ಸುಲಭವಾಗಿ ಆರ್ಥೈಸಿಕೊಳ್ಳ ಬಹುದಾಗಿದೆ. ಕೇವಲ ಬಸವ ಜಯಂತಿಯ ಸಂದರ್ಭದಲ್ಲಿ ಮಾತ್ರ ಬಸವಣ್ಣನವರನ್ನು ನೆನಪಿಸಿಕೊಂಡರೆ ಸಾಲದು; ನಿತ್ಯವೂ ಅವರ ಸ್ಮರಣೆ ಆಗಬೇಕು ಮತ್ತು ಅವರ ತತ್ವ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಕಾರ್ಯದರ್ಶಿ ಎಸ್. ಮಹೇಶ್, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್. ಮಲ್ಲೇಶ್, ಮಹಿಳಾ ಘಟಕದ ಅಧ್ಯಕ್ಷೆ ಉಷಾರಾಣಿ, ತಾಲೂಕು ಘಟಕದ ಅಧ್ಯಕ್ಷ ಜಯರಾಜ್, ವೀರಶೈವ ಸಮಾಜದ ಶೆಟ್ರು ಮೃತ್ಯುಂಜಯ, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾಸುದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.