ವೀರಾಜಪೇಟೆ, ಏ. ೨೮: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕೆದಮುಳ್ಳೂರಿನ ಶ್ರೀ ಮಾರಿಯಮ್ಮ ದೇವಿ ಮತ್ತು ಪರಿವಾರ ದೈವಗಳ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕೊಟ್ಟೋಳಿ ಗ್ರಾಮ ಕೆ. ಬೋಯಿಕೇರಿ ಗ್ರಾಮದ ಗ್ರಾಮ ದೇವತೆಯಾಗಿ ಬನದಲ್ಲಿ ಶ್ರೀ ಮಾರಿಯಮ್ಮ ಮತ್ತು ಪರಿವಾರ ದೈವಗಳ ಉತ್ಸವವು ವಿಧಿವಿಧಾನಗಳೊಂದಿಗೆ ನಡೆಯಿತು.
ಉತ್ಸವದ ಮೊದಲ ದಿನ ಸಂಜೆ ದೇವಿಯ ಉತ್ಸವದ ಮೂರ್ತಿಯನ್ನು ಕೊಟ್ಟೋಳಿ ಕಿರು ನದಿಯಿಂದ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಯಿತು. ಮೂಲ ದೇವತೆಯಾದ ಶ್ರೀ ಮಾರಿಯಮ್ಮ ದೇವಿಗೆ ಆರಾಧನೆಗಳು ನಡೆದವು. ಮಾರಿಯಮ್ಮ (ಕಾಳಿಯ ಅವತಾರದಲ್ಲಿ) ಪೂಜಿಸಲ್ಪಡುತ್ತಿದೆ. ಪರಿವಾರ ದೈವಗಳಾದ ಭಗವತಿ, ಮಹಾವಿಷ್ಣು, ಸ್ವಾಮಿ ಕೊರಗಜ್ಜ, ದುರ್ಗಿ, ಗುಳಿಗ ದೇವರುಗಳಿಗೆ ವಿಶೇಷ ಆರಾಧನೆಗಳು ಜರುಗಿದವು. ದ್ವಿತೀಯ ದಿನದಲ್ಲಿ ದೇವಿಗೆ ವಿಶೇಷ ಆರಾಧನೆ, ಸ್ವಾಮಿ ಕೊರಗಜ್ಜ, ದುರ್ಗಿ, ಗುಳಿಗ ದೇವರುಗಳ ಪಾತ್ರಿಗಳಿಂದ ದರ್ಶನ ನಡೆದವು. ಪೂರ್ವಾಹ್ನ ದೇವಿಗೆ ಮತ್ತು ಕೊರಗಜ್ಜ ದೇವರುಗಳಿಗೆ ಅಗೆಲು ಸೇವೆ ನಡೆದು ಮಾಹಾಪೂಜೆ ನಡೆಯಿತು. ದೇಗುಲದ ಆಡಳಿತ ಮಂಡಳಿಯಿAದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ದೇಗುಲದ ಆಡಳಿತ ಮಂಡಳಿಯ ಸದಸ್ಯರು, ಪೂಜಾ ಕರ್ಮಿಗಳು, ದರ್ಶನಿಕರು, ಗ್ರಾಮವಾಸಿಗಳು ಸೇರಿದಂತೆ ನಗರ ವ್ಯಾಪ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.