ಗೋಣಿಕೊಪ್ಪಲು, ಏ. ೨೮: ದೇಶದ ಪ್ರಧಾನಿಗಳ ಆಶಯದಂತೆ ೨೦೨೫ರ ವೇಳೆಗೆ ಭಾರತ ದೇಶವನ್ನು ಮಲೇರಿಯಾ ಮುಕ್ತವನ್ನಾಗಿ ಮಾಡಲು ನಾವೆಲ್ಲರೂ ಪಣ ತೊಡಬೇಕೆಂದು ವೀರಾಜಪೇಟೆ ತಾಲೂಕಿನ ವೈದ್ಯಾಧಿಕಾರಿಗಳಾದ ಡಾ. ಯತಿರಾಜ್ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಾಲೂಕು ಅಧಿಕಾರಿಗಳು ವೀರಾಜಪೇಟೆ ತಾಲೂಕು ಇವರ ಜಂಟಿ ಆಶ್ರಯದಲ್ಲಿ ‘ವಿಶ್ವ ಮಲೇರಿಯಾ ದಿನ’ದ ಅಂಗವಾಗಿ ಗೋಣಿಕೊಪ್ಪಲುವಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಮಲೇರಿಯಾ ಪ್ರಕರಣಗಳು ತೀರಾ ಕಡಿಮೆಯಿದೆ.

ಸೊಳ್ಳೆ ಕಡಿತ ದಿಂದ ಮಲೇರಿಯಾ ರೋಗ ಹರಡುತ್ತದೆ. ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಅವಧಿಯಲ್ಲಿ ಎರಡು ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ. ಹೊರ ಜಿಲ್ಲೆಯಿಂದ ಆಗಮಿಸಿದ ಓರ್ವ ವ್ಯಕ್ತಿ ಹಾಗೂ ಅಸ್ಸಾಂ ರಾಜ್ಯದಿಂದ ಆಗಮಿಸಿದ ಓರ್ವ ವ್ಯಕ್ತಿಯಿಂದ ರೋಗ ಕಾಣಿಸಿಕೊಂಡಿತ್ತು. ಮನುಷ್ಯನಲ್ಲಿ ತೀವ್ರ ಜ್ವರ, ನಿಶ್ಯಕ್ತಿ ಕಂಡು ಬಂದಲ್ಲಿ ಕೂಡಲೇ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಈ ಮಾಹಿತಿ ಒದಗಿಸಬೇಕು ಅಂತಹವರು ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡಬೇಕು.

ಕಳೆದ ಬಾರಿ ತಾಲೂಕಿನಲ್ಲಿ ೩೨ ಸಾವಿರ ಸಂಖ್ಯೆಯಲ್ಲಿ ರಕ್ತ ಲೇಪನವನ್ನು ಸಂಗ್ರಹಿಸಿ ೨೪ ಗಂಟೆಯ ಒಳಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈ ವೇಳೆ ಹೊರಜಿಲ್ಲೆ ಹಾಗೂ ರಾಜ್ಯದ ಎರಡು ಪ್ರಕರಣಗಳು ಮಾತ್ರ ವರದಿಯಾಗಿದ್ದವು.

ರೋಗ ಬಾರದ ರೀತಿಯಲ್ಲಿ ನಾಗರಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಲೇರಿಯಾ ಮುಕ್ತ ಮಾಡಲು ಕೈ ಜೋಡಿಸಬೇಕೆಂದು ಡಾ. ಯತಿರಾಜ್ ಕರೆ ನೀಡಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಮಾತನಾಡಿದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಿತಾ, ಸೇರಿದಂತೆ ತಾಲೂಕಿನ ವಿವಿಧ ಭಾಗದ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸಿದರು. ಆರೋಗ್ಯ ಇಲಾಖೆಯ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಶಿಕಾಂತ್ ಸ್ವಾಗತಿಸಿ, ವಂದಿಸಿದರು.