ಮಡಿಕೇರಿ, ಏ. ೨೮: ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ ಕಾವೇರಿ ಕಾಲೇಜಿನ ಮುಂಭಾಗದ ಸಾರ್ವಜನಿಕ ಬಸ್ ತಂಗುದಾಣದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಚಿಪ್ಪುಹಂದಿಯ ಚಿಪ್ಪುಗಳನ್ನು (ಪೆಂಗೋಲಿನ್ ಚಿಪ್ಪು) ತುಂಬಿಸಿಕೊAಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ೮ ಕೆ.ಜಿ. ೭೫೦ ಗ್ರಾಂ. ತೂಕದ ಚಿಪ್ಪುಹಂದಿಯ ಚಿಪ್ಪುಗಳನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತ್ಯಾಗತ್ತೂರು ವಾಲ್ನೂರಿನ ಜೆ.ಎ. ರಾಜು, ಅರಮೇರಿ ಮೈತಾಡಿಯ ನಿಖಿಲ್, ನಾಪೋಕ್ಲು ಸಮೀಪದ ಹೊದ್ದೂರಿನ ಚಂದ್ರ ಬಂಧಿತ ಆರೋಪಿಗಳು. ವನ್ಯಜೀವಿ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು, ಬಂಧಿತ ಆರೋಪಿಗಳನ್ನು ಪೊನ್ನಂಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ೧೫ ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ. ಶರತ್ ಚಂದ್ರ ನಿರ್ದೇಶನದ ಮೇರೆಗೆ ಮೇರೆಗೆ ಮಡಿಕೇರಿ ಸಿಐಡಿ

(ಮೊದಲ ಪುಟದಿಂದ) ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಎನ್.ಟಿ. ಶ್ರೀನಿವಾಸ ರೆಡ್ಡಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಆರಕ್ಷಕ ಉಪನಿರೀಕ್ಷಕಿ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನ, ಎಸ್.ಎಂ. ಯೋಗೇಶ್, ಪಿ.ಯು. ಮುನೀರ್, ಆರ್. ನಂದಕುಮಾರ್ ಅವರು ಭಾಗವಹಿಸಿದ್ದರು.