ಸೋಮವಾರಪೇಟೆ,ಏ.೨೭: ಅವಿವಾಹಿತ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣ ಸಮೀಪದ ಚೌಡ್ಲು ಗ್ರಾ.ಪಂ.ವ್ಯಾಪ್ತಿಯ ಬೀರೇಬೆಟ್ಟ ಗ್ರಾಮದಲ್ಲಿ ನಡೆದಿದೆ.
ಬೀರೇಬೆಟ್ಟ ನಿವಾಸಿ ವೇಣು(೩೪) ಎಂಬಾತನೇ ನೇಣಿಗೆ ಶರಣಾದವನಾಗಿದ್ದು, ಆತ್ಮಹತ್ಯೆಗೆ ಅನಾರೋಗ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ ವೇಣು ಅವರ ಪೋಷಕರು ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಕಳೆದ ೮ ವರ್ಷಗಳ ಹಿಂದೆ ಸಹೋದರನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಓರ್ವ ಸಹೋದರಿಯನ್ನು ಸಕಲೇಶಪುರದ ಯುವಕನಿಗೆ ವಿವಾಹ ಮಾಡಿಕೊಟ್ಟಿದ್ದರಿಂದ ಮನೆಯಲ್ಲಿ ಓರ್ವನೇ ವಾಸವಿದ್ದ.
ನೇಣಿಗೆ ಶರಣಾಗುವ ಮೊದಲು ಟಿಮೆಟ್ ಸೇವಿಸಿರುವ ವೇಣು, ಅದರ ನೋವು ಹೆಚ್ಚಾದ ಸಂದರ್ಭ ಮನೆಯ ಛಾವಣಿ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ. ಕಳೆದ ಕೆಲ ವರ್ಷಗಳಿಂದ ಸೋರಿಯಾಸಿಸ್ ಖಾಯಿಲೆಯಿಂದ ಬಳಲುತ್ತಿದ್ದ ಈತನಿಗೆ ೩ ತಿಂಗಳ ಹಿಂದೆ ಖಾಯಿಲೆ ಉಲ್ಬಣಗೊಂಡಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.
ಇAದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.