ಶನಿವಾರಸಂತೆ, ಏ. ೨೮: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ಹಲಗೆ ಜಂಪೋತ್ಸವ ಮೇ ೨ ಮತ್ತು ೩ ರಂದು ನಡೆಯಲಿದೆ.

ಮೇ ೨ರಂದು ಬೆಳಿಗ್ಗೆ ೫ ಗಂಟೆಗೆ ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ ಹಾಗೂ ಶ್ರೀ ವೀರಭದ್ರೇಶ್ವರ, ಮಲ್ಲೇಶ್ವರ ಹಾಗೂ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನಗಳ ಅರ್ಚಕ ಚಂದ್ರಯ್ಯ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಮಹಾಗಣಪತಿ ಪೂಜೆ, ಪುಣ್ಯಾಹ ನಾಂದಿ, ಪಂಚಕಳಸ ಸ್ಥಾಪನೆ, ಶ್ರೀ ಮಲ್ಲೇಶ್ವರ ಸ್ವಾಮಿಗೆ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ಗಣಪತಿ, ರುದ್ರ, ನವಗ್ರಹ, ಪ್ರಾಯಶ್ಚಿತ್ತ ಹೋಮಗಳು, ಶ್ರೀಕನ್ನಂಬಾಡಿ ಅಮ್ಮನವರಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗವಿದೆ. ರಾತ್ರಿ ೯.೩೦ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ ಗಂಗಾಸ್ನಾನಕ್ಕೆ ತೆರಳುವುದು.

ನಂತರ ನಂದಿಧ್ವಜ ಕುಣಿತ, ವೀರಗಾಸೆ ತಂಡದವರಿAದ ಶ್ರೀ ವೀರಭದ್ರ ನೃತ್ಯ ಹಾಗೂ ಚಿಟ್ಟೆಮೇಳ ವಾದ್ಯದೊಂದಿಗೆ ಮೆರವಣಿಗೆ ಬರುವುದು ತಿಪಟೂರಿನ ವಿಘ್ನಸಂತೆಯ ರಾಜ್ಯಮಟ್ಟದ ವೀರಗಾಸೆ ಯುವರತ್ನ, ವೀರಗಾಸೆ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್, ನಿರಂಜನ್ ಪ್ರಸಾದ್ ಮತ್ತು ಸಂಗಡಿಗರು ವೀರಗಾಸೆ ಕುಣಿತ ಪ್ರದರ್ಶಿಸಲಿದ್ದಾರೆ.

ಮೇ ೩ರಂದು ಬೆಳಿಗ್ಗೆ ೬.೩೦ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡೋತ್ಸವ, ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.