ಏ. ೨೭: ಅನಾರೋಗ್ಯದಿಂದಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಜ್ಜೇನು ದಾಳಿ ಮಾಡಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಬ್ಬೂರುಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಹಳೇ ಮದಲಾಪುರ (ಕಾಟಿಕೊಪ್ಪಲು) ಹಾಡಿಯಲ್ಲಿ ಬುಧವಾರ ಸಂಜೆ ೬.೩೦ ಗಂಟೆಗೆ ನಡೆದಿದೆ.ಹಾಡಿಯ ನಿವಾಸಿ ಗೋವಿಂದ (೪೮) ಎಂಬವರೇ ಮೃತ ದುರ್ದೈವಿ. ಮಂಗಳವಾರ ಮೃತಪಟ್ಟಿದ್ದ ಹಾಡಿಯ ಕುಮಾರ ಎಂಬವರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಒಂದೇ ಸಮನೆ ಹೆಜ್ಜೇನು ಹುಳುಗಳು ಸ್ಥಳದಲ್ಲಿಯೇ ಇದ್ದ ಗೋವಿಂದ ಎಂಬವರ ಮೇಲೆರಗಿದ್ದರಿಂದ ಗೋವಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹಾಗೆಯೇ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವರು ಹೆಜ್ಜೇನು ಧಾಳಿ ಕಂಡು ಸ್ಥಳದಲ್ಲಿದ್ದ ಶವವನ್ನು ಹಾಗೆಯೇ ಬಿಟ್ಟು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹೆಜ್ಜೇನು ಧಾಳಿಗೆ ಒಳಗಾಗಿ ಗಾಯಗೊಂಡ ಮುತ್ತಪ್ಪ, ಪಾರ್ವತಿ, ಅಣ್ಣಯ್ಯ, ಪರಣ್ಣಿ, ನಾಗಣ್ಣ, ಗೌಡ ಈ ಆರು ಮಂದಿಯನ್ನು ಕುಶಾಲನಗರದ (ಮೊದಲ ಪುಟದಿಂದ) ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪತ್ರಿಕೆ ಯೊಂದಿಗೆ ಮಾತನಾಡಿದ ಆದಿವಾಸಿ ಸಂಘಟನೆಯ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಕೆ.ಮುತ್ತ, ಕೂಡಲೇ ಗಿರಿಜನ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ನಮ್ಮ ಗಿರಿಜನರ ಹಿತರಕ್ಷಣೆಗೆ ಮುಂದಾಗಬೇಕು. ಹೆಜ್ಜೇನು ಧಾಳಿಯಿಂದಾಗಿ ಮೃತಪಟ್ಟ ಗೋವಿಂದ ಅವರ ಕುಟುಂಬಕ್ಕೆ ಪ್ರಕೃತಿ ವಿಕೋಪ ನಿಧಿಯಡಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. -ವರದಿ: ಕೆ.ಎಸ್. ಮೂರ್ತಿ