ಗೋಣಿಕೊಪ್ಪಲು, ಏ. ೨೮: ಕೊಡಗಿನ ಮೂಲ ನಿವಾಸಿಗಳಲ್ಲಿ ಒಂದಾಗಿರುವ ಯರವ ಸಮುದಾಯವು ಒಗ್ಗಟ್ಟನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡು ಸಮುದಾಯದ ಏಳಿಗೆಗೆ ದುಡಿಯುವಂತೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಿದೇರಿರ ನವೀನ್ ಕರೆ ನೀಡಿದರು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ವೈ.ಯಂ. ರವಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಎವು ಲಾತ್ಲೇರಂಡಾ ಕುಟುಂಬದ ಕ್ರಿಕೆಟ್ ಪಂದ್ಯಾಟದ ಲಾಂಛನ (ಲೋಗೋ) ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪ್ರತಿವರ್ಷ ಸಮುದಾಯವನ್ನು ಒಂದೆಡೆ ಸೇರಿಸುವ ಪ್ರಯತ್ನ ಕ್ರೀಡೆಯ ಮೂಲಕ ನಡೆಯುತ್ತಿದೆ. ಜಿಲ್ಲೆಯ ಮೂಲೆ ಮೂಲೆಯಲ್ಲಿರುವ ಸಮುದಾಯವನ್ನು ಗುರುತಿಸಿ ಕ್ರೀಡಾಕೂಟದಲ್ಲಿ ಭಾಗಿಗಳಾಗುವಂತೆ ಮಾಡಬೇಕೆಂದು ತಿಳಿಸಿದರು.
ಯರವ ಜನಾಂಗ ಕುಟುಂಬ-ಕುಟುAಬಗಳ ನಡುವೆ ಮೇ ೪ ರಿಂದ ೮ ರವರೆಗೆ ತಿತಿಮತಿ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಈ ಬಾರಿ ಎವುಲಾತ್ಲೇರಂಡಾ ಕುಟುಂಬದ ಹೆಸರಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಜಿಲ್ಲೆಯ ೬೪ ಯರವ ಜನಾಂಗದ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೆಸರು ನೋಂದಾವಣೆ ಮಾಡಿದೆ ಎಂದು ಅಧ್ಯಕ್ಷ ರವಿ ತಿಳಿಸಿದರು.
ಸಮಾರೋಪ ಸಮಾರಂಭದAದು ಮಹಿಳೆಗಾಗಿ ಹಗ್ಗಜಗ್ಗಾಟ, ಸಂಸ್ಕೃತಿ ಪರಂಪರೆಯನ್ನು ಉಳಿಸುವ ಪ್ರಯತ್ನವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಲ್ಲದೆ ಸಮುದಾಯದ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ವೈ.ಎಂ. ರೂಪೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಂಚಾಲಕ ವೈ.ಕೆ. ಮಲ್ಲಪ್ಪ, ಯರವ ಸಮಾಜದ ಉಪಾಧ್ಯಕ್ಷ ಪಿ.ಎಸ್. ಕಾಳ, ಖಜಾಂಚಿ ಪಿ.ಎಂ. ಗಣೇಶ, ಕಾರ್ಯದರ್ಶಿ ಪಿ.ಆರ್. ಮಂಜು, ನಿರ್ದೇಶಕರುಗಳಾದ ಪಿ.ಎಸ್. ಶಶಿ, ಪಿ.ಆರ್. ಸಂಜು, ಪಿ.ಎ. ದಿನೇಶ್, ವೈ. ಎಂ. ರೂಪೇಶ್, ವೈ.ಟಿ. ಪವಿ, ಪಿ.ಎಂ. ಪ್ರವೀಣ ವೈ.ಬಿ. ಅಶೋಕ್, ಪಿ.ಎಂ. ನಿತಿನ್ ಹಾಗೂ ಪಿ.ಎಂ. ರಘು ಉಪಸ್ಥಿತರಿದ್ದರು.