ಮಡಿಕೇರಿ, ಏ. ೨೮: ನಾಳಿನ ಉತ್ತಮ ಭವಿಷ್ಯಕ್ಕಾಗಿ ನಾವು ಭೂಮಿಯ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸಂಸ್ಕರಣೆಯತ್ತ ಗಮನಹರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಒಕ್ಕೂಟ ಹಾಗೂ ಹಾಸನ ಜಿಲ್ಲೆಯ ಸೀಕೋ ಸಂಸ್ಥೆ ವತಿಯಿಂದ ವಿಶ್ವ ಭೂಮಿ ದಿನದ ಅಂಗವಾಗಿ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಬಾಣೆಯ ಹಸಿರು ವನದ ಬಳಿ ಏರ್ಪಡಿಸಿದ್ದ ಭೂಮಿ ಸಂರಕ್ಷಣೆ ಕುರಿತ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಪೀಳಿಗೆಗಾಗಿ ನಾವು ಹಸಿರು ಭೂಮಿಯನ್ನು ಕೊಡುಗೆಗಾಗಿ ನೀಡಬೇಕಾದುದು ನಮ್ಮ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮ ಸಂಘಟಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಭೂ ಮಾಲಿನ್ಯ ತಡೆಗಟ್ಟುವ ಮೂಲಕ ನೆಲ-ಜಲ, ಜೀವಿ ವೈವಿಧ್ಯ ಹಾಗೂ ಪರಿಸರ ಸಂರಕ್ಷಣೆಗೆ ದಿಟ್ಟ ಹೆಜ್ಜೆ ಇಡಬೇಕಿದೆ. ಈ ದಿಸೆಯಲ್ಲಿ ನಮ್ಮ ನಡಿಗೆ ಪರಿಸರದೆಡೆಗೆ ಆಗಬೇಕಿದೆ ಎಂದರು.
ಭೂಮಿಯ ಸಂರಕ್ಷಣೆ ಕುರಿತ ಜಾಗೃತಿ ಆಂದೋಲನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಾಗೃತಿ ಅಭಿಯಾನದಲ್ಲಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಮನೋಹರ್ ನಾಯಕ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಹೆಚ್.ಜಿ. ಕುಮಾರ್, ಅನುದಾನಿತ ವಿಜ್ಞಾನ ಪರಿಷತ್ತಿನ ಪ್ರಮುಖರಾದ ಎಂ.ಎನ್. ವೆಂಕಟನಾಯಕ್, ಎಸ್. ನಾಗರಾಜ್, ಪಿ.ಎಸ್. ರವಿಕೃಷ್ಣ, ಶಿಕ್ಷಕರ ಸಂಘಟನೆಯ ಪ್ರಮುಖರಾದ ಬಿ.ಎಸ್. ಲಾಲುಕುಮಾರ್, ರೋಹಿತ್, ಎನ್.ಕೆ. ಮೆಹಬೂಬ್ ಸಾಬ್, ದಯಾನಂದ ಪ್ರಕಾಶ್, ಎಸ್.ಡಿ. ಪ್ರಶಾಂತ್, ರತ್ನಕುಮಾರ್, ಅನಿತಾ, ಗಿಡ್ಡಯ್ಯ, ಶರತ್, ಎಂ.ಎಸ್. ಮಹೇಂದ್ರ, ಯಶವಂತ್, ತಿಮ್ಮಯ್ಯ ಇತರರು ಇದ್ದರು.