ಕೂಡಿಗೆ, ಏ.೨೬:ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪ ಗಂಗೆ ಕಲ್ಯಾಣ ಗ್ರಾಮದಲ್ಲಿರುವ ರೇಷ್ಮೆ ಇಲಾಖೆಯ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಯ ಕುಟುಂಬದವರು ವಾಸಿಸು ತ್ತಿರುವುದನ್ನು ಗ್ರಾಮಸ್ಥರ ಕೋರಿಕೆಯ ಮೇರೆಗೆ, ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಅಪ್ಪಚ್ಚು ರಂಜನ್ ಅವರು ಸೀಗೆಹೊಸೂರು ಗ್ರಾಮದ ವಿವಿಧ ಕಾಮಗಾರಿಗಳ ಭೂಮಿ ಪೂಜೆಗೆ ಅಗಮಿಸಿದ ಸಂದರ್ಭದಲ್ಲಿ ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರು. ಗಂಗೆ ಕಲ್ಯಾಣ ಗ್ರಾಮದಲ್ಲಿ ಕಳೆದ ೩೦ ವರ್ಷಗಳ ಹಿಂದೆ ಪರಿಶಿಷ್ಟ ಪಂಗಡದವರಿಗೆ ರೇಷ್ಮೆ ಇಲಾಖೆಯ ವತಿಯಿಂದ ಚಾಕಿ ಸಾಕಣೆಯ ಕೇಂದ್ರವನ್ನು ತೆರೆಯಲಾಗಿತ್ತು. ರೇಷ್ಮೆ ಇಲಾಖೆಯ ಕಾರ್ಯ ಸ್ಥಗಿತಗೊಂಡಿದ್ದು, ಈ ಕಟ್ಟಡದ ಒಂದು ಭಾಗದಲ್ಲಿ ಅಂಗನವಾಡಿ ಕೇಂದ್ರವು ನಡೆಯುತ್ತಿದೆ ಇನ್ನೊಂದು ಭಾಗದಲ್ಲಿ ಖಾಸಗಿ ವ್ಯಕ್ತಿಯ ಕುಟುಂಬದವರು ವಾಸಿಸುತ್ತಿರುವುದನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ಗಿರಿಜನ ಸಮುದಾಯದ ಜಾಗವಾಗಿರುವುದರಿಂದ, ಅಲ್ಲದೆ ಈ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಪರಿಶಿಷ್ಟ ಪಂಗಡ ಕುಟುಂಬದವರು ಇರುವುದರಿಂದ ಸಮುದಾಯದ ಕುಟುಂಬದವರಿಗೆ ಅನುಕೂಲವಾಗುವಂತೆ ಒಂದು ಸಮುದಾಯದ ಭವನ ನಿರ್ಮಾಣ ಮಾಡಲು ಸಾಧ್ಯವಾಗುವುದು ಇದರಿಂದಾಗಿ ಖಾಸಗಿ ವ್ಯಕ್ತಿಯ ಕುಟುಂಬದವರನ್ನು ತೆರವುಗೊಳಿಸಲು ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಅನಂತ್, ಗಿರೀಶ್, ಚಂದ್ರು ಜಯಶೀಲಾ ಜಯಶ್ರೀ, ಪ್ರಮುಖರಾದ ರಾಮಕೃಷ್ಣ ನಾಗರಾಜ. ಬಿಜೆಪಿ ಓಬಿಸಿ ಘಟಕದ ಅಧ್ಯಕ್ಷ ಕೃಷ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಂಜಯ್ಯ, ಕೃಷ್ಣ, ಚಿಮ್ಮಿ, ಗೌರಮ್ಮ, ರಾಜು ರಾಮಣ್ಣ, ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.