ಕಣಿವೆ, ಏ. ೨೬: ಬೇಸಗೆಯ ದಿನಗಳಲ್ಲಿ ರೈತರು ಹೆಚ್ಚಾಗಿ ಬೆಳೆಯುವ ಪ್ರಮುಖ ಬೆಳೆಯಾಗಿರುವ ಕಲ್ಲಂಗಡಿ ಕೃಷಿಗೆ ಮಳೆ ಬಂದರೆ ಸಾಕು "ಬೆಳೆ ಮತ್ತು ಬೆಲೆ" ಎರಡು ಕೂಡ ಇಳಿಕೆಯಾಗುತ್ತವೆ. ಅಂದರೆ ಕಲ್ಲಂಗಡಿ ಕೃಷಿ ದಿನೇ ದಿನೇ ಕೃಷವಾಗುತ್ತದೆ. ಅಂದರೆ ಮಳೆಗಾಲದಲ್ಲಿ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತದೆ. ಅದೇ ಬಿರು ಬೇಸಗೆಯ ದಿನಗಳಲ್ಲಿ ರಸ್ತೆ ಬದಿಗಳಲ್ಲಿ ಹಣ್ಣು ಮಾರುವವ ಗ್ರಾಹಕರನ್ನು ಆಕರ್ಷಿಸಲು ಈ ಕಲ್ಲಂಗಡಿ ಹಣ್ಣನ್ನು ಜೋಡಿಸಿ ಇಟ್ಟು ಹಣ್ಣನ್ನು ತುಂಡರಿಸಿ ಇಟ್ಟಾಗ ಕಾಣುವ ಕೆಂಪನೆಯ ನೋಟ ಬಿಸಿಲ ಧಗೆಗೆ ಸಿಲುಕಿ ಬಳಲಿ ಬಾಯಾರಿದವರ ಬಾಯಲ್ಲಿ ನೀರು ತರಿಸುತ್ತದೆ.
ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಈ ಬಾರಿ ಈ ಹಣ್ಣಿನ ಫಸಲಿಗೆ ಕೆ.ಜಿ.ಯೊಂದಕ್ಕೆ ಕನಿಷ್ಟ ರೂ. ೧೦ ಇದೆ. ಗರಿಷ್ಠ ಎಂದರೆ ಕೆ.ಜಿ. ಒಂದಕ್ಕೆ ರೂ. ೧೪ ವರೆಗೂ ತೆರಳಿದ್ದೂ ಉಂಟು ಎನ್ನುತ್ತಾರೆ ಕುಶಾಲನಗರದ ಕಾವೇರಿ ನದಿ ದಂಡೆಯಲ್ಲಿ ಹತ್ತಾರು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆಸಿರುವ ಆವರ್ತಿ ಗ್ರಾಮದ ಚಂದ್ರಶೇಖರ್.
ಸ್ವAತ ಭೂಮಿ ಇದ್ದು ಮನೆಯವರೇ ಕೃಷಿ ಮಾಡಿದರೆ ಈ ಫಸಲಿಗೆ ಕೆ.ಜಿ.ಯೊಂದಕ್ಕೆ ರೂ. ೬ ರಿಂದ ೮ ಸಿಕ್ಕರೂ ಒಳ್ಳೆಯ ಆದಾಯವೇ ಎನ್ನುವ ಈ ಬೆಳೆಗಾರ ಚಂದ್ರಶೇಖರ್, ಬೇರೆಯವರ ಭೂಮಿಯನ್ನು ಭೋಗ್ಯಕ್ಕೆ ಪಡೆದು ಈ ಹಣ್ಣಿನ ಕೃಷಿ ಮಾಡಿದಾಗ, ಬೆಳೆಯೂ ಬಂದು ಕೆ.ಜಿ. ಒಂದಕ್ಕೆ ಕನಿಷ್ಟ ರೂ. ೧೦ ಸಿಕ್ಕರೆ ಮಾತ್ರ ಆದಾಯ ಗಳಿಸಬಹುದು ಎಂಬುದು ಅವರ ಅನುಭವದ ಮಾತು.
ಕಳೆದ ಎರಡೂ ವರುಷಗಳಲ್ಲಿ ಇದೇ ಹಣ್ಣಿನ ಬೆಳೆ ಬೆಳೆದಾಗ ನಾಡನ್ನು ಕಾಡಿದ ಕೊರೊನಾ ಕರಿನೆರಳು ಬೆಳೆದವರ ಬದುಕನ್ನು ಮೂರಾಬಟ್ಟೆ ಮಾಡಿತ್ತು.
ಇದೀಗ ಈ ಬೆಳೆ ನಮ್ಮ ಕೈ ಹಿಡಿದಿದೆ. ಆದರೆ ಮಳೆ ಬಂದರೆ ಮಾತ್ರ ನಮ್ಮೀ ಬೆಳೆ ನಮಗೆ ಒಂದಷ್ಟು ನಷ್ಟಕ್ಕೆ ಕಾರಣವಾಗುತ್ತದೆ.
ಅಂದರೆ ರಸ್ತೆ ಬದಿಗಳಲ್ಲಿ ಹೆಚ್ಚು ಹೆಚ್ಚಾಗಿ ಈ ಹಣ್ಣನ್ನು ಅಂದವಾಗಿ ಜೋಡಿಸಿ ತುಂಡರಿಸಿ ಮಾರಾಟಕ್ಕೆ ಇಟ್ಟಾಗ ಗ್ರಾಹಕರು ಅಷ್ಟೇ ಸಂತಸದಿAದ ಬಂದು ಹಣ್ಣು ತಿಂದು ಆನಂದಿಸಿ ಆ ಹಣ್ಣು ಮಾರುವವರಿಗೆ ನೀಡುವ ಹಣದ ಒಂದು ಪಾಲು ಬೆಳೆಗಾರರಾದ ನಮಗೆ ಖುಷಿ ಕೊಡುತ್ತದೆ ಎನ್ನುತ್ತಾರೆ ಅವರು.
-ಕೆ. ಎಸ್. ಮೂರ್ತಿ, ಕುಶಾಲನಗರ.