ಮಡಿಕೇರಿ, ಏ. ೨೬: ಪ್ರತಿಷ್ಠಿತ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿದ್ದಾಪುರದ ಚಿನ್ನ- ಬೆಳ್ಳಿ ವರ್ತಕರಾದ ಕೆ.ಕೆ. ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಕುಶಾಲನಗರದ ರಾಮಕೃಷ್ಣಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ಇಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈರ್ವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿರುವ ರಾಮಕೃಷ್ಣಯ್ಯ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕೆ.ಕೆ. ಶ್ರೀನಿವಾಸ್ ಹಾಗೂ ಹಾಲಿ ಅಧ್ಯಕ್ಷರಾಗಿದ್ದ ಕೆ.ಎಂ. ಗಣೇಶ್ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ರಾಮಕೃಷ್ಣಯ್ಯ, ಬಿ.ಆರ್. ಸವಿತಾ ರೈ ಹಾಗೂ ಎಸ್.ಐ. ಮುನೀರ್ ಅಹ್ಮದ್ ಅವರುಗಳು ನಾಮಪತ್ರ ಸಲ್ಲಿಸಿದ್ದರು. ಗಣೇಶ್ ಅವರ ಬಣದ ಪರ ಎಂಟು ಮಂದಿ ಹಾಗೂ ಬಿಜೆಪಿ ಬೆಂಬಲಿತ ಶ್ರೀನಿವಾಸ್ ಬಣದ ಪರ ಒಂಭತ್ತು ಮಂದಿ ಬೆಂಬಲಿಗ ನಿರ್ದೇಶಕರು ಗಳಿದ್ದರು. ಹಾಗಾಗಿ ಚುನಾವಣೆ ಅನಿವಾರ್ಯ ಎಂದಾದಾಗ ಕೊನೆಯಲ್ಲಿ ಗಣೇಶ್, ಸವಿತಾ ರೈ, ಮುನೀರ್ ಅವರುಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ಆಗಿದೆ.

ಸಂಘದ ೧೭ ಮಂದಿ ನಿರ್ದೇಶಕರುಗಳ ಸ್ಥಾನಕ್ಕೆ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ ೧೦ ಸ್ಥಾನಗಳಿಗೆ ೧೮ ಮಂದಿ ಸ್ಪರ್ಧಾಕಣದಲ್ಲಿದ್ದರು. ಕಳೆದ ತಾ.೧೭ರಂದು ನಡೆದ ಚುನಾವಣೆಯಲ್ಲಿ ೧೦ ಮಂದಿ ಆಯ್ಕೆಯಾಗಿದ್ದರು. ಇದೀಗ ನಿರ್ದೇಶಕರುಗಳು ಸೇರಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ.

ರಾಜಕೀಯ ನುಸುಳಬಾರದು

ತಾನು ೧೦ ವರ್ಷಗಳ ಕಾಲ ಚೇಂಬರ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹೊಸಬರಿಗೆ ಬಿಟ್ಟುಕೊಡಬೇಕು ಹಾಗೂ ಸಂಘದಲ್ಲಿ ರಾಜಕೀಯ ನುಸುಳಬಾರದೆಂದು ಸ್ಪರ್ಧೆಯಿಂದ ಹಿಂದೆ ಸರಿದಿರುವದಾಗಿ ಕೆ.ಎಂ. ಗಣೇಶ್ ಹೇಳಿದರು. ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡ ಅವರು, ಚೇಂಬರ್‌ನ ಇತಿಹಾಸದಲ್ಲೇ ಚುನಾವಣೆ ನಡೆದಿಲ್ಲ, ಚುನಾವಣೆ ನಡೆದರೆ ವೈಮನಸು, ಭಿನ್ನಾಭಿಪ್ರಾಯಗಳು ಮೂಡುತ್ತವೆ. ಸಂಘದ ಅಭಿವೃದ್ಧಿ ಮುಖ್ಯ. ಸಂಘ ಸ್ಥಾಪನೆ ಮಾಡಿದ ಜಿ. ರಾಜೇಂದ್ರ ಅವರಿಂದ ಹಿಡಿದು ಇದುವರೆಗೆ ಅನೇಕರು ಸೇವೆ ಮಾಡಿದ್ದಾರೆ. ಎಂದಿಗೂ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ಆಗಿದೆ. ಹಾಗಾಗಿ ನಾವುಗಳು ಕೂಡ ಸ್ಪರ್ಧೆಯಿಂದ ಹಿಂದೆ ಸರಿದು ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾಗಿ ಗಣೇಶ್ ಹೇಳಿದರು.