ಮಡಿಕೇರಿ, ಏ. ೨೬: ಮುಂಬರುವ ದಿನಗಳಲ್ಲಿ ಕೋವಿಡ್ ೪ನೇ ಅಲೆ ವ್ಯಾಪಕವಾಗಬಹುದೆಂಬ ತಜ್ಞರ ಅಭಿಪ್ರಾಯದ ಬೆನ್ನಲ್ಲೇ ಲಸಿಕೆಯ ಬಗ್ಗೆ ಮರೆತಿದ್ದ ಸಾರ್ವಜನಿಕರು ಮತ್ತೇ ಜಾಗೃತರಾಗುತ್ತಿದ್ದಾರೆ. ರಾಷ್ಟç ರಾಜಧಾನಿ ನವದೆಹಲಿ ಸೇರಿದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಮೊದಲೆರಡು ಲಸಿಕಾ ಡೋಸ್‌ಗಳನ್ನು ಪಡೆದು ಆರಾಮವಾಗಿದ್ದ ಮಂದಿ ಇದೀಗ ಬೂಸ್ಟರ್ ಡೋಸ್ ಲಸಿಕೆಯನ್ನೂ ಪಡೆಯಬೇಕೆಂಬ ಕೌತುಕದಲ್ಲಿದ್ದಾರೆ. ಆದರೆ, ಇಷ್ಟರ ಮಟ್ಟಿಗೆ ಲಸಿಕೆಗೆ ಬೇಡಿಕೆ ಇದ್ದರೂ ಸಹ ೬೦ ವರ್ಷ ಮೇಲ್ಪಟ್ಟವರು ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಮುಂಚೂಣಿ ಕಾರ್ಯಕರ್ತರನ್ನು ಹೊರತುಪಡಿಸಿದರೆ ಇತರರಿಗೆ ಅವಧಿಯಾಗಿದ್ದರೂ ಬೂಸ್ಟರ್ ಡೋಸ್ ನೀಡುವಂತೆ ಕೇಂದ್ರ ಸರಕಾರ ಇದುವರೆಗೂ ಆದೇಶಿಸಿಲ್ಲ.
ಖಾಸಗಿಯಾಗಿ ರೂ.೨೨೫ರೊಂದಿಗೆ ರೂ.೧೭೫ ಹೆಚ್ಚುವರಿ ಸೇವಾ ಶುಲ್ಕ ಪಾವತಿಸಿದರೆ ಮಾತ್ರ ೬೦ ವರ್ಷ ವಯೋಮಿತಿ ಕೆಳಗಿರುವ ಬೂಸ್ಟರ್ ಡೋಸ್ ಫಲಾನುಭವಿಗಳಿಗೆ (೨ನೇ ಡೋಸ್ ಪಡೆದು
(ಮೊದಲ ಪುಟದಿಂದ) ಕನಿಷ್ಟ ೯ ತಿಂಗಳು ಕಳೆದಿರಬೇಕು) ಲಸಿಕೆ ದೊರಕುತ್ತಿದೆ. ಆದರೆ ಕೊಡಗು ಜಿಲ್ಲೆಯ ಜನತೆಗೆ ಇದು ಕೂಡ ಕಷ್ಟದಾಯಕವಾಗಿದೆ – ಕಾರಣ, ಜಿಲ್ಲೆಯಲ್ಲಿ ಅಮ್ಮತ್ತಿಯ ಖಾಸಗಿ ಸಂಸ್ಥೆಯೊAದು ಮಾತ್ರ ಲಸಿಕೆಯನ್ನು ಖರೀದಿಸಿದ್ದು ಇಲ್ಲಿ ಮಾತ್ರ ೬೦ ವರ್ಷ ಕೆಳಗಿನವರಿಗೆ ಬೂಸ್ಟರ್ ಡೋಸ್ ಲಭ್ಯ.
ಆದೇಶವಿಲ್ಲದಿದ್ದರೂ ಸಂದೇಶ – ಗೊಂದಲ
೬೦ ವರ್ಷ ವಯೋಮಿತಿಯ ಕೆಳಗಿರುವವರಿಗೆ ಉಚಿತ ಲಸಿಕೆ ನೀಡಲು ಸರಕಾರ ಆದೇಶಿಸಿಲ್ಲವಾದರೂ ಈ ವಯೋಮಿತಿಯಲ್ಲಿ ೨ನೇ ಡೋಸ್ ಪಡೆದು ೯ ತಿಂಗಳು ಕಳೆದವರಿಗೆ ಲಸಿಕೆ ಪಡೆದುಕೊಳ್ಳಿ ಎಂಬ ಸಂದೇಶ ಫೋನುಗಳಿಗೆ ರವಾನೆಯಾಗುತ್ತಿರುವುದು ಸಾರ್ವಜನಿಕರ ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಗಳ ಘರ್ಷಣೆಗೆ ಕಾರಣವಾಗುತ್ತಿದೆ. ‘ಲಸಿಕೆ ಪಡೆಯುವಂತೆ ನಮಗೆ ಸಂದೇಶ ಬಂದಿದೆ, ಆದರೆ ನೀವು ಯಾಕೆ ಕೊಡುತ್ತಿಲ್ಲ..?’ ಎಂಬುದಾಗಿ ಲಸಿಕಾ ಕೇಂದ್ರಗಳಿಗೆ ತೆರಳಿ ಸಾರ್ವಜನಿಕರು ಪ್ರಶ್ನಿಸುತ್ತಿರುವ ಹಲವಾರು ಪ್ರಸಂಗಗಳು ಜಿಲ್ಲೆಯಾದ್ಯಂತ ಸಾಮಾನ್ಯವಾಗಿದೆ.
ಕೇಂದ್ರ ಸರಕಾರದ ಕೋವಿನ್ ಪೋರ್ಟಲ್ ಮೂಲಕ ಸ್ವಯಂ ಸಂದೇಶ ಕಳುಹಿಸಲ್ಪಡುತ್ತಿದೆ. ಈ ಪೋರ್ಟಲ್‌ನಲ್ಲಿ, ೨ನೇ ಡೋಸ್ ಪಡೆದು ೯ ತಿಂಗಳು ಕಳೆದ ಫಲಾನುಭವಿಗಳಿಗೆ ಸಂದೇಶ ಕಳಿಸುವಂತೆ ತಂತ್ರಾAಶ ಇದ್ದು, ಅದೇ ಪ್ರಕಾರ ಫಲಾನುಭವಿಗಳ ಫೋನ್‌ಗಳಿಗೆ ಸಂದೇಶ ತಲುಪುತ್ತಿದೆ. ಆದರೆ ಸರಕಾರದ ಪ್ರಕಾರ, ೬೦ ವರ್ಷ ವಯೋಮಿತಿ ಕೆಳಗಿನವರು ಇನ್ನೂ ಉಚಿತ ಬೂಸ್ಟರ್ ಡೋಸ್‌ಗೆ ಅರ್ಹರಲ್ಲ ಎಂಬ ಅಂಶ ಈ ಪೋರ್ಟಲ್‌ನಲ್ಲಿ ಇಲ್ಲದಿರುವ ಕಾರಣ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಂಘರ್ಷಕ್ಕೆ ಕಾರಣವಾಗುತ್ತಿದೆ.
‘ವೇಸ್ಟೇಜ್’ ಸಮಸ್ಯೆ
ಲಸಿಕೆ ನೀಡುವಾಗ ಮತ್ತೊಂದು ಸಮಸ್ಯೆ ಎಂದರೆ, ‘ವೇಸ್ಟೇಜ್’ ತಪ್ಪಿಸುವುದು. ಒಂದು ವಯಲ್ ಲಸಿಕೆಯಲ್ಲಿ ೧೦ ಡೋಸ್‌ಗಳನ್ನು ನೀಡಬಹುದು. ಆದರೆ, ಹತ್ತು ಮಂದಿ ಬರದಿದ್ದರೆ ಅನವಶ್ಯಕವಾಗಿ ಲಸಿಕೆಯ ಡೋಸ್‌ಗಳು ವ್ಯರ್ಥವಾಗುತ್ತವೆ. ಒಂದು ಬಾರಿ ವಯಲ್ ಮುಚ್ಚಳ ತೆರೆದರೆ, ೧೦ ಮಂದಿಗೂ ಲಸಿಕಾ ಡೋಸ್‌ಗಳನ್ನು ನೀಡಬೇಕು. ಇಲ್ಲದಿದ್ದಲ್ಲಿ ಇತರ ಡೋಸ್‌ಗಳು ಅನವಶ್ಯಕವಾಗಿ ವ್ಯರ್ಥವಾಗುತ್ತವೆ.
ಪ್ರಸ್ತುತ ೧೨ ರಿಂದ ೧೭ರ ವಯೋಮಾನದ ಫಲಾನುಭವಿಗಳು ಮಾತ್ರ ಲಸಿಕೆಯ ಮೊದಲೆರಡು ಡೋಸ್‌ಗಳನ್ನು ಪಡೆಯಲು ಬಾಕಿ ಇದ್ದು, ಇಂತಹ ಫಲಾನುಭವಿಗಳು ಲಸಿಕಾ ಕೇಂದ್ರಗಳಿಗೆ ತೆರಳಿದರೆ ೧೦ ಮಂದಿ ಆ ಕೇಂದ್ರಕ್ಕೆ ಬರುವ ತನಕವೂ ಕಾಯಬೇಕಾಗಿದೆ.
ಒಂದು ವೇಳೆ ಸರಕಾರ ೬೦ ವರ್ಷ ಕೆಳಗಿನವರಿಗೂ ಉಚಿತ ಬೂಸ್ಟರ್ ಡೋಸ್ ನೀಡುವಂತೆ ಆದೇಶಿಸಿದರೆ ಹೆಚ್ಚಿನ ಮಂದಿ ಲಸಿಕಾ ಕೇಂದ್ರಗಳೊಳಗೆ ತೆರಳುವುದರಿಂದ ೧೦ ಮಂದಿಗೆ ಕಾಯುವುದಾಗಲಿ, ‘ವೇಸ್ಟೇಜ್’ ಸಮಸ್ಯೆಯಾಗಲಿ ಇರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಖಚಿತ. ಇದರೊಂದಿಗೆ ಇತರ ಕೆಲವು ಜಿಲ್ಲೆಗಳ ಮಾದರಿಯಂತೆ ವಾರಕ್ಕೆ ೨ ದಿನ ಮಾತ್ರ ಲಸಿಕಾಕರಣ ಅಭಿಯಾನ ಮಾಡಿದರೆ, ಕೊಡಗು ಜಿಲ್ಲೆಯಲ್ಲಿ ವೇಸ್ಟೇಜ್ ಸಮಸ್ಯೆಯಾಗಲಿ, ಸಾರ್ವಜನಿಕರು ಅನವಶ್ಯಕ ಕಾಯುವುದನ್ನಾಗಲಿ ತಪ್ಪಿಸಬಹುದಾಗಿದೆ.
ಲಸಿಕಾಕರಣ ವಿವರ
ಜಿಲ್ಲೆಯಲ್ಲಿ ಇದುವರೆಗೆ ೪,೩೨೫ ಆರೋಗ್ಯ ಕಾರ್ಯಕರ್ತರು, ೨,೦೬೯ ಮುಂಚೂಣಿ ಕಾರ್ಯಕರ್ತರು ಹಾಗೂ ೬೦ ವರ್ಷ ಮೇಲ್ಪಟ್ಟ ೧೫,೬೦೨ ಮಂದಿ ಬೂಸ್ಟರ್ ಡೋಸ್ ಲಸಿಕೆಯನ್ನು ಉಚಿತವಾಗಿ ಪಡೆದುಕೊಂಡಿದ್ದಾರೆ. ೧೫ ರಿಂದ ೧೭ ವಯೋಮಿತಿಯಲ್ಲಿ ಶೇ. ೧೦೦ ರಷ್ಟು ಮೊದಲನೆಯ ಡೋಸ್ ಸಾಧನೆಯಾಗಿದ್ದು, ೨೦,೨೮೯ ಮಂದಿ ೨ನೇ ಡೋಸ್ ಪಡೆಯುವುದರ ಮೂಲಕ ಶೇ.೮೪ ರಷ್ಟು ಸಾಧನೆಯಾಗಿದೆ. ೧೨ ರಿಂದ ೧೪ ವಯೋಮಿತಿಯ ೧೩,೨೨೯ ಮಕ್ಕಳು ಮೊದಲನೆಯ ಡೋಸ್ ಹಾಗೂ ೯೨೩ ಮಂದಿ (ಶೇ. ೬.೯೮) ೨ನೇ ಡೋಸ್ ಪಡೆದುಕೊಂಡಿದ್ದಾರೆ.
-ಪ್ರಜ್ವಲ್ ಜಿ.ಆರ್.