ಮಡಿಕೇರಿ,ಏ.೨೬: ಮಲೇರಿಯಾ ಕರ್ನಾಟಕ ರಾಜ್ಯದಲ್ಲಿ ೨೦೨೫ಕ್ಕೆ ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಸಾಧಿಸಬೇಕಾಗಿರುವುದ ರಿಂದ ಎಲ್ಲಾ ಹಂತಗಳಲ್ಲೂ ಮಲೇರಿಯಾ ನಿವಾರಣಾ ಚಟುವಟಿಕೆ ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ತಾಲೂಕು ಆರೋಗ್ಯಾಧಿ ಕಾರಿ ಡಾ. ಚೇತನ್ ಅವರು ಹೇಳಿದರು.

ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಂದು ವಿಶ್ವ ಮಲೇರಿಯಾ ದಿನ ಆಚರಿಸಲಾಗಿದ್ದು, ಈ ಬಾರಿಯ ಘೋಷಣೆ "ನವೀನ ವಿಧಾನಗಳನ್ನು ಬಳಸೋಣ-ಮಲೇರಿಯಾ ಕಡಿಮೆ ಮಾಡಿ, ಜೀವ ಉಳಿಸೋಣ" ಎಂಬುದಾಗಿದೆ ಎಂದರು.

ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣ ದಲ್ಲಿ ಸಮುದಾಯದ ಪಾತ್ರ ದೊಡ್ಡದು. ಸೊಳ್ಳೆಗಳ ನಿಯಂತ್ರಣ ಕ್ಕಾಗಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳ ಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ರಕ್ಷಣಾತ್ಮಕ ಸೊಳ್ಳೆ ಪರದೆ ಬಳಸುವುದು, ಮೈ ತುಂಬ ಬಟ್ಟೆಗಳನ್ನು ಧರಿಸುವುದು ಹಾಗೂ ಯಾವುದೇ ಜ್ವರವಿರಲಿ ತಕ್ಷಣ ರಕ್ತ ಪರೀಕ್ಷೆ ಮಾಡಿಸಿ ವೈದ್ಯರಲ್ಲಿ ತೋರಿಸಿಕೊಂಡು ಚಿಕಿತ್ಸೆ ಪಡೆಯು ವಂತೆ ಸಲಹೆ ನೀಡಿದರು. ಮಲೇರಿಯಾ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಭಾಗಿತ್ವದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಮಲೇರಿಯಾ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಮತ್ತು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಅವರು ಮಾಹಿತಿ ನೀಡಿದರು.

ತಾಲೂಕು ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ದೇಚಮ್ಮ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ನಿಲೀಮಾ, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮುತ್ತು, ಲೋಕೇಶ್, ಪ್ರೇಮ್ ಕುಮಾರ್, ಜಗದೀಶ್, ತಾಲೂಕಿನ ಸಮುದಾಯ ಆರೋಗ್ಯಾಧಿಕಾರಿ ಗಳು, ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತರು ಹಾಜರಿದ್ದರು.

ಜಾಗೃತಿ ಜಾಥಾ: ಮಲೇರಿಯಾ ರೋಗ ನಿರ್ಮೂಲನೆ ಕುರಿತು ಜಾಗೃತಿ ಜಾಥಾಗೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಆನಂದ ಅವರು ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್, ಜಿಲ್ಲಾ ಎಂಟೊಮಾಲಜಿಸ್ಟ್ ಮಂಜುನಾಥ್ ಇತರರು ಇದ್ದರು.