ಗೋಣಿಕೊಪ್ಪಲು. ಏ. ೨೫ : ಅರಣ್ಯ ವ್ಯಾಪ್ತಿಯಲ್ಲಿ ನೂರಾರು ಬಗೆಯ ಪ್ರಾಣಿ ಪಕ್ಷಿಗಳು ನೈಸರ್ಗಿಕವಾಗಿ ಸಿಗುವ ಆಹಾರವನ್ನು ತಿಂದು ಜೀವಿಸುತ್ತವೆ. ನಾಗರಹೊಳೆ ವನ್ಯಜೀವಿ ವಿಭಾಗದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನೇಕ ಪ್ರಾಣಿಗಳು ತಾನಾಗಿಯೇ ಮೃತಪಟ್ಟ ಸಂದರ್ಭ ಅಲ್ಲಿನ ಅಧಿಕಾರಿಗಳು ಇವುಗಳನ್ನು ಆ ಪ್ರದೇಶದಲ್ಲಿ ಸುಡುವ ಅಥವಾ ಹೂಳುವ ವ್ಯವಸ್ಥೆ ಪಾಲಿಸುತ್ತಿದ್ದರು. ಇದೀಗ ಸುತ್ತೋಲೆ ಜಾರಿಯಾದ ಬಳಿಕ ಇಂತಹ ವ್ಯವಸ್ಥೆಯನ್ನು ಬದಲಾಯಿಸಿರುವ ಅಧಿಕಾರಿಗಳು ವನ್ಯಜೀವಿ ವ್ಯಾಪ್ತಿಯಲ್ಲಿ ಮೃತ ಪಡುವ ಪ್ರಾಣಿಗಳನ್ನು ಹಾಗೆಯೇ ಬಿಡಲಾಗುತ್ತಿದೆ. ಇಂತಹ ಮೃತಪಟ್ಟ ಪ್ರಾಣಿಗಳನ್ನು ಇತರ ಪ್ರಾಣಿಗಳು ತಿಂದು ಜೀವಿಸುತ್ತಿವೆ.
ಸರ್ಕಾರದ ಸುತ್ತೋಲೆಯ ನಂತರ ಇತ್ತೀಚೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆಯೊAದು ಅರಣ್ಯದಲ್ಲಿ ಸ್ವಾಭಾವಿಕವಾಗಿ ಮೃತಪಟ್ಟ ನಂತರ ಅರಣ್ಯದಲ್ಲಿದ್ದ ಕಾಡು ಹಂದಿಗಳು ಈ ಜಿಂಕೆಯ ಮೃತದೇಹವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಚಿತ್ರವು ಸೆರೆಯಾಗಿದೆ. ಇದರಿಂದ ಪ್ರಾಣಿ ಸಂಕುಲಗಳು ಅರಣ್ಯದಲ್ಲಿಯೇ ತನ್ನ ಆಹಾರವನ್ನು ಕಂಡುಕೊಳ್ಳುತ್ತಿವೆ. ಈ ಹಿಂದೆ ದೊಡ್ಡ ಪ್ರಾಣಿಗಳು ಬೇಟೆಯಾಡಿ ಅರ್ಧ ತಿಂದು ಬಿಟ್ಟಿದ್ದ ಮೃತದೇಹವನ್ನು ಇತರ ಪ್ರಾಣಿಗಳು ಸೇವಿಸುತ್ತಿದ್ದವು. ಇದೀಗ ಸುತ್ತೋಲೆ ನಂತರ ಅರಣ್ಯದಲ್ಲಿ ಸ್ವಾಭಾವಿಕವಾಗಿ ಮೃತಪಟ್ಟ ಪ್ರಾಣಿಗಳನ್ನು ಹಾಗೆಯೇ ಬಿಡುತ್ತಿರುವುದರಿಂದ ಇತರ ಪ್ರಾಣಿಗಳು ಇದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ಅರಣ್ಯದಲ್ಲಿ ಸಾವನ್ನಪ್ಪುವ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೆ ಆಹಾರ ಸಿಗುವ ಅವಕಾಶಗಳು ಹೆಚ್ಚಾಗುತ್ತಿವೆ.