ಗೋಣಿಕೊಪ್ಪಲು, ಏ.೨೬: ಇತ್ತೀಚೆಗೆ ದೇಶದಲ್ಲಿ ಜಾತಿ ಪಿಡುಗು ಹೆಚ್ಚಾಗಿದ್ದು, ಈ ಪಿಡುಗನ್ನು ದೂರ ಮಾಡಲು ನಾವೆಲ್ಲರೂ ಪ್ರಯತ್ನಿಸ ಬೇಕು, ಮನುಷ್ಯತ್ವವನ್ನು ಬೆಳೆಸಿಕೊಳ್ಳ ಬೇಕು. ಆಗಾದಲ್ಲಿ ನಮ್ಮ ಸಮಾಜ ಉತ್ತಮವಾಗಿರಲು ಸಾಧ್ಯ ಎಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಅಭಿಪ್ರಾಯಪಟ್ಟರು.
ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿ.ಆರ್.ಅಂಬೇಡ್ಕರ್ರವರ ೧೩೧ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಇವರು ಅಂಬೇಡ್ಕರ್ ರವರು ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಇತ್ತೀಚೆಗೆ ಜಾತಿ ಎಂಬ ಪಿಡುಗು ಎಲ್ಲೆಡೆ ವ್ಯಾಪಿಸಿದೆ. ಇದು ಸಮಾಜಕ್ಕೆ ಅಪಾಯಕಾರಿ ಎಂದು ಆತಂಕ ವ್ಯಕ್ತ ಪಡಿಸಿದರು. ಅಂಬೇಡ್ಕರ್ರವರ ಆದರ್ಶ ಗುಣಗಳನ್ನು ಪ್ರತಿ ನಾಗರಿಕನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರಿಯಾದ ಮಾರ್ಗದಲ್ಲಿ ನಡೆಯುವಂತಾಗಬೇಕು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸಂಸ ಹಿರಿಯ ಮುಖಂಡರಾದ ಟಿ.ಎನ್. ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಅಂಬೇಡ್ಕರ್ ಜಯಂತಿ ಕೇವಲ ಒಂದು ದಿನಕ್ಕೆ ಸೀಮಿತವಾಗ ಬಾರದು, ಪ್ರತಿ ದಿನ ಇವರ ನೆನಪು ಮನದಲ್ಲಿರುವ ಹಾಗೇ ಕಾರ್ಯಕ್ರಮ ಗಳು ವರ್ಷಪೂರ್ತಿ ನಡೆಯಬೇಕು, ಅಂಬೇಡ್ಕರ್ರವರ ಕಷ್ಟದ ದಿನಗಳು ಮರೆಯುವಂತಿಲ್ಲ. ಇಡೀ ವಿಶ್ವಕ್ಕೆ ಇವರು ಕೊಡುಗೆ ನೀಡಿದ್ದಾರೆ. ಸಂವಿಧಾನವನ್ನು ಉಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕೆಂದರು. ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ತಿತಿಮತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ರೂಪಾ ಮಾತನಾಡಿ ಅಂಬೇಡ್ಕರ್ರವರ ಜೀವನ ಚರಿತ್ರೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಣಿಕೊಪ್ಪ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುಬ್ಬಯ್ಯ, ಉಪನ್ಯಾಸಕ ಅರ್ಜುನ್ ಮೌರ್ಯ, ಯುವ ವಕೀಲ ಪ್ರದೀಪ್, ಪ್ರಾಂತರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹರೀಶ್, ಜಲಮೂಲ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಪುಳಿಂಜನ ಪೂವಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಸಭೆ ಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಪಿ.ಎಸ್.ಮುತ್ತ, ದಸಂಸ ತಾಲೂಕು ಸಂಚಾಲಕ ಚಂದ್ರ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ್ ಮಹಾದೇವ್, ಎಸ್.ಟಿ. ಗಿರೀಶ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿ ದ್ದರು. ಕುಮಾರ್ ಮಹಾದೇವ್ ಸ್ವಾಗತಿಸಿ ರಂಜಿತ, ನಿರ್ಮಲ ನಿರೂಪಿಸಿ ಗಿರೀಶ್ ವಂದಿಸಿದರು. ನಗರದ ಮುಖ್ಯ ಬೀದಿಯಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು .ಎಸ್.ಟಿ. ಗಿರೀಶ್ ತಂಡದಿAದ ಕ್ರಾಂತಿಗೀತೆ ಹಾಡಲಾಯಿತು. ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.