*ಗೋಣಿಕೊಪ್ಪ, ಏ. ೨೫: ಹಲವು ವರ್ಷಗಳಿಂದ ಪೈಸಾರಿ ಜಾಗ ಅತಿಕ್ರಮಣ ಮಾಡಿಕೊಂಡು ಕಾಫಿ ಬೆಳೆಯನ್ನು ಬೆಳೆಸಿದ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಚಿಂತನೆ ಹರಿಸಿದೆ. ಈ ನಿಟ್ಟಿನಲ್ಲಿ ೧೦ ಎಕರೆಯೊಳಗೆ ಅತಿಕ್ರಮಣ ಮಾಡಿಕೊಂಡು ಕಾಫಿ ಬೆಳೆದ ಬೆಳೆಗಾರರಿಗೆ ೩೦ ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ಜಾಗ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರು ಮಾಹಿತಿ ನೀಡಿದ್ದಾರೆ.
ಪೊನ್ನಂಪೇಟೆ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಅತಿಕ್ರಮಣದಿಂದ ಬೆಳೆಗಾರರು ಸರ್ಕಾರಿ ಜಾಗದಲ್ಲಿ ಕಾಫಿ ತೋಟಗಳನ್ನು ಬೆಳೆಸಿದ್ದಾರೆ. ೫೩, ೫೦, ೫೭ ಫಾರಂ ಅರ್ಜಿಯಲ್ಲಿ ಜಾಗ ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ್ದರೂ, ಕೆಲವು ತಾಂತ್ರಿಕ ಸಮಸ್ಯೆಯಿಂದ ಬಗೆಹರಿದಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅತಿಕ್ರಮಣದಿಂದ ಪೈಸಾರಿ ಜಾಗದಲ್ಲಿ ಬೆಳೆದ ಕಾಫಿ ತೋಟಗಳನ್ನು ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಎರಡೂವರೆ ಎಕರೆಗೆ ಮೂರು ಸಾವಿರ ರೂಪಾಯಿ ವಾರ್ಷಿಕ ತೆರಿಗೆಯನ್ನು ಬೆಳೆಗಾರರು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಉದ್ದೇಶದೊಂದಿಗೆ ಮಡಿಕೇರಿಯ ಕ್ರಿಸ್ಟಲ್ ಹಾಲ್ನಲ್ಲಿ ಮೇ ತಿಂಗಳ ೧೨ರಂದು ಬೆಳೆಗಾರರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳೊAದಿಗೆ ಮತ್ತು ಕಂದಾಯ
(ಮೊದಲ ಪುಟದಿಂದ) ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿಯೂ ಶಾಸಕರು ಈ ಸಂದರ್ಭ ತಿಳಿಸಿದರು. ಕಂದಾಯ ಸಚಿವ ಆರ್. ಅಶೋಕ್ ಅವರು ಕ್ರಿಸ್ಟಲ್ ಕೋರ್ಟ್ನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳೆಗಾರರ ಸಮಾವೇಶದಲ್ಲಿ ಬೆಳೆಗಾರರ ಸಮಸ್ಯೆಗೆ ಸಂಬAಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಬೆಳೆಗಾರರು ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾಫಿ ಬೆಳೆಗಾರರಿಗೆ ಬಸವರಾಜ್ ಬೊಮ್ಮಾಯಿ ಅವರ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ. ಈಗಾಗಲೇ ಬೆಳೆಗಾರರ ಬೇಡಿಕೆಯಂತೆ ೧೦ ಹೆಚ್.ಪಿ ಮೋಟಾರಿಗೆ ಉಚಿತ ವಿದ್ಯುತ್ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಬೆಳೆಗಾರರಲ್ಲಿ ಹೊಸ ಚೈತನ್ಯ ತುಂಬಿದೆ. ಅದೇ ನಿಟ್ಟಿನಲ್ಲಿ ಅತಿಕ್ರಮಣದಿಂದ ಪೈಸಾರಿ ಜಾಗದಲ್ಲಿ ಕಾಫಿ ತೋಟಗಳನ್ನು ಬೆಳೆದ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಕ್ರಮವು ವಿನೂತನ ಮಾದರಿಯಾಗಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ಗಣಪತಿ, ಸದಸ್ಯ ತೀತಿಮಾಡ ಲಾಲಭೀಮಯ್ಯ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಚೋಡುಮಾಡ ಶರಿನ್ ಸುಬ್ಬಯ್ಯ ಉಪಸ್ಥಿತರಿದ್ದರು.
-ಎನ್.ಎನ್. ದಿನೇಶ್