ಕುಶಾಲನಗರ, ಏ. ೨೫: ಕುಶಾಲನಗರ ಪಟ್ಟಣ ಪಂಚಾಯಿತಿ ದಫೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ ಎನ್ ಮೋಹನ್ ಕುಮಾರ್ ಅವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಮಾಡುವ ರಾಜ್ಯಮಟ್ಟದ ಕಾಯಕಯೋಗಿ -೨೦೨೨ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪರಿಷತ್ತು ಮೂಲಕ ರಾಜ್ಯಮಟ್ಟದಲ್ಲಿ ಪ್ರತಿ ಜಿಲ್ಲೆಯಿಂದ ತಲಾ ಓರ್ವ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಕುಶಾಲನಗರದ ಮೋಹನ್ ಕುಮಾರ್ ಅವರ ಸೇವೆ ಗುರುತಿಸಿ ಆಯ್ಕೆಮಾಡಲಾಗಿದೆ.
ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕಳೆದ ಮೂರು ದಶಕಗಳಿಂದ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿ ಪ್ರಸಕ್ತ ದಫೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್ ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೇ ಒಂದರ ಕಾರ್ಮಿಕ ದಿನಾಚರಣೆಯಂದು ಬೆಂಗಳೂರಿನ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಗು ಜಿಲ್ಲಾ ಅಧ್ಯಕ್ಷೆÀ ವನಿತಾ ಚಂದ್ರಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.