ಸೋಮವಾರಪೇಟೆ, ಏ. ೨೬: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಠಾಣಾಧಿಕಾರಿಯಾಗಿ ತರಬೇತಿ ಪಡೆಯುತ್ತಿರುವ ಕಾಶಿನಾಥ ಬಗಲಿ ಎಂಬವರು ರಾಜ್ಯ ಸರ್ಕಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ವಿರುದ್ಧ ನಾಲಿಗೆ ಹರಿಬಿಟ್ಟು, ಲೂಟಿಯ ಆರೋಪ ಮಾಡಿರುವ ಬಗ್ಗೆ ಚೌಡ್ಲು ಗ್ರಾ.ಪಂ. ಸದಸ್ಯರೋರ್ವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಪ್ರೊಬೇಷನರಿ ಪಿಎಸ್‌ಐ ಕಾಶಿನಾಥ್ ಅವರು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಲೂಟಿಯ ಆರೋಪ ಮಾಡಿದ್ದೂ ಅಲ್ಲದೇ, ಗ್ರಾ.ಪಂ. ಸದಸ್ಯರುಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ಸರ್ಕಾರ ನಡಿತಾ ಇರೋದೆ ನಮ್ಮಿಂದ ನಾವ್ ಏನ್ ಬೇಕಾದ್ರೂ ಮಾಡ್ಬಹುದು. ಸರ್ಕಾರ ಅಷ್ಟೊಂದು ಬಡತನದಲ್ಲಿಲ್ಲ; ಕೋಟ್ಯಾಂತರ ರೂಪಾಯಿ ಲೂಟಿ ಮಾಡ್ತಾ ರ‍್ತಾರೆ. ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ

‘.....ಫರ್’ಗಳು” ಎಂದು ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟಿದ್ದಾರೆ. ಪ್ರೊಬೇಷನರಿ ಅವಧಿಯಲ್ಲೇ ಹೀಗೆ ನಾಲಿಗೆ ಹರಿಬಿಟ್ಟ ಪಿಎಸ್‌ಐ ವಿರುದ್ಧ ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಅವರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಏನಿದು ಘಟನೆ?: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ವಾರ್ಡ್ ೪ರಲ್ಲಿ ರಮೇಶ ಎಂಬುವರ ಮನೆಯ ಪಕ್ಕದಲ್ಲಿ ನಾಗರ ಹಾವೊಂದು ಕಂಡುಬAದಿದ್ದು, ಈ ಹಾವನ್ನು ಹಿಡಿಯಲು ಪ್ರಯತ್ನಿಸಿದಾಗ ಅದು ಬಿಲ ಸೇರಿಕೊಂಡಿದೆ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಸೋಮವಾರಪೇಟೆ ಠಾಣೆ ಪ್ರೊಬೆಷನರಿ ಪಿಎಸ್‌ಐ ಕಾಶಿನಾಥ ಬಗಲಿ ಅವರು, ನಾಗರ ಹಾವು ಹಿಡಿಯಲು ಕಾಂಕ್ರೀಟ್ ರಸ್ತೆಯನ್ನು ಅಗೆಯಬೇಕು ಎಂದು ಎಂದಿದ್ದಾರೆ. ಇದೇ ಸಂದರ್ಭ ಸ್ಥಳಕ್ಕೆ ತೆರಳಿದ ಗ್ರಾ.ಪಂ. ಸದಸ್ಯ ಗಣಪತಿ ಅವರೊಂದಿಗೆ ಮಾತನಾಡುತ್ತಾ, ರಸ್ತೆ ಅಗೆಯಲು ವ್ಯವಸ್ಥೆ ಮಾಡಲು ತಿಳಿಸಿದ್ದಾರೆ.

ಇದಕ್ಕೆ ಒಪ್ಪದ ಗಣಪತಿ ಅವರು ಒಂದು ಹಾವಿಗಾಗಿ ರಸ್ತೆಯನ್ನು ಅಗೆದರೆ ಸಂಚಾರ ದುಸ್ತರವಾಗುತ್ತದೆ. ನುರಿತ ಉರಗ ತಜ್ಞರನ್ನು ಕರೆಸಿ ಹಾವನ್ನು ಹಿಡಿಸಿದರೆ ಆಯಿತು. ಒಂದು ವೇಳೆ ರಸ್ತೆ ಅಗೆದರೆ ಮರು ನಿರ್ಮಾಣ ಕಷ್ಟಸಾಧ್ಯ ಎಂದಿದ್ದಾರೆ. ಈ ಸಂದರ್ಭ ವಾದಕ್ಕೆ ಇಳಿದ ಕಾಶಿನಾಥ ಬಗಲಿ, ‘‘ಸರ್ಕಾರ ನಡಿತಾ ಇರೋದೆ ನಮ್ಮಿಂದ ನಾವ್ ಏನ್ ಬೇಕಾದ್ರೂ ಮಾಡ್ಬಹುದು. ಸರ್ಕಾರ ಅಷ್ಟೊಂದು ಬಡತನದಲ್ಲಿಲ್ಲ; ಕೋಟ್ಯಾಂತರ ರೂಪಾಯಿ ಲೂಟಿ ಮಾಡ್ತಾ ರ‍್ತಾರೆ. ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ‘... ..ಫರ್’ಗಳು” ಎಂದು ಬೈದಿದ್ದಾರೆ.

ಇದರಿಂದ ಆಕ್ರೋಶಗೊಂಡ ಗ್ರಾ.ಪಂ. ಸದಸ್ಯ ಗಣಪತಿ ಹಾಗೂ ಚೌಡ್ಲು ಗ್ರಾ.ಪಂ. ಮಾಜೀ ಅಧ್ಯಕ್ಷೆ ವನಜ ಅವರು, ‘‘ಗ್ರಾ.ಪಂ. ಸದಸ್ಯರ ಬಗ್ಗೆ ಹಗುರವಾಗಿ ಮಾತಾಡ್ಬೇಡಿ’’ ಎಂದು ಪಿಎಸ್‌ಐಗೆ ತಾಕೀತು ಮಾಡಿದ್ದಾರೆ. ಗ್ರಾ.ಪಂ. ಸದಸ್ಯರನ್ನು ನಿಂದಿಸಿದ ಪಿಎಸ್‌ಐ ವಿರುದ್ಧ ಸೋಮವಾರಪೇಟೆ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.