ಕೂಡಿಗೆ, ಏ. ೨೫: ಕುಶಾಲನಗರ ತಾಲೂಕು ವ್ಯಾಪ್ತಿಯ ೫ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ನೆರವೇರಿಸಿದರು.

ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಿರುವ ಕುಡಿಯುವ ನೀರಿನ ಶೇಖರಣಾ ಟ್ಯಾಂಕ್‌ಗಳನ್ನು ಉದ್ಘಾಟಿಸಿದ ಶಾಸಕ ರಂಜನ್, ರಸ್ತೆ ನಿರ್ಮಾಣದ ವಿವಿಧ ಗ್ರಾಮಗಳ ಉಪ ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ೧೪ ಕೋಟಿಯ ಜಲ ಜೀವನ್ ಕುಡಿಯುವ ನೀರಿನ ಯೋಜನೆ ಕಾಮಗಾರಿ, ಮತ್ತು ೪.೫ ಕೋಟಿ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ಒಳಗೊಂಡAತೆ ಸುಮಾರು ೨೦ ಕೋಟಿ ರೂಗಳ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಜೆಜೆಎಂ ಯೋಜನೆಗೆ ಕೊಡಗು ಜಿಲ್ಲೆಗೆ ಈಗಾಗಲೆ ೧೫೦ ಕೋಟಿ ಅನುದಾನ ಒದಗಿಸಲಾಗಿದೆ. ಹೆಚ್ಚುವರಿ ೨೦೦ ಕೋಟಿ ರೂಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಸದರ ಸಮ್ಮುಖದಲ್ಲಿ ಜೆಜೆಎಂ ಕಾಮಗಾರಿಗಳ ಪರಿಶೀಲನೆಗೆ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭ ಏನಾದರೂ ಕುಂದುಕೊರತೆ ಕಂಡುಬAದಲ್ಲಿ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಸಾರ್ವಜನಿಕರು ನೀರನ್ನು ಮಿತ ಬಳಕೆ ಮಾಡುವ ಮೂಲಕ ಜೀವಜಲವನ್ನು ಮುಂದಿನ ಪೀಳಿಗೆಗೆ ಕೊಡುಗೆ ನೀಡಲು ಸಲಹೆ ನೀಡಿದರು.

ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯರಾದ ಶ್ರೀನಿವಾಸ್, ಮಂಜುಳಾ, ಆಯಾ ಗ್ರಾ.ಪಂ. ವ್ಯಾಪ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರು , ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ಪ್ರಮುಖರು, ಹಾಗೂ ತಾಲೂಕು ಕುಡಿಯುವ ನೀರಿನ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರಕುಮಾರ್ ಸಹಾಯಕ ಇಂಜಿನಿಯರ್ ಕೀರ್ತನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.