ಸೋಮವಾರಪೇಟೆ,ಏ.೨೫: ಮಲೆನಾಡು ಭಾಗದ ಕೂತಿನಾಡು ಸುಗ್ಗಿ ಎಂದೇ ಹೆಸರುವಾಸಿಯಾಗಿರುವ ನಗರಳ್ಳಿ ಗ್ರಾಮದ ಸುಗ್ಗಿ ಹಬ್ಬವು ಸಂಭ್ರಮ ಸಡಗರದೊಂದಿಗೆ ಸಾಂಪ್ರದಾಯಿಕ ಆಚರಣೆಗಳ ಮೂಲಕ ಶ್ರದ್ಧಾಭಕ್ತಿಯಿಂದ ನಡೆಯಿತು.

ಕೋವಿಡ್ ಹಿನ್ನೆಲೆ ಕಳೆದೆರಡು ವರ್ಷಗಳಿಂದ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಂಡಿದ್ದ ನಗರಳ್ಳಿ ಸುಗ್ಗಿ ಉತ್ಸವ ಈ ಬಾರಿ ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಸಂಭ್ರಮದಿAದ ನೆರವೇರಿತು.

೧೨ ವರ್ಷಕ್ಕೊಮ್ಮೆ ಆಚರಿಸಲ್ಪಡುವ ಹೆಮ್ಮಕ್ಕಳ(ಹೆಣ್ಣುಮಕ್ಕಳ) ಸುಗ್ಗಿ ಪ್ರಸಕ್ತ ವರ್ಷ ಆಚರಣೆಗೊಂಡ ಹಿನ್ನೆಲೆ ಹೆಣ್ಣುಮಕ್ಕಳಲ್ಲಿ ಸಂಭ್ರಮಕ್ಕೆ ಕಾರಣವಾಗಿತ್ತು. ವಿಶೇಷ ಸುಗ್ಗಿ ಬನದಲ್ಲಿ ಮಹಿಳೆಯರು ನರ್ತಿಸುತ್ತ ಪ್ರದಕ್ಷಿಣೆ ಹಾಕಿದರು. ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ದೇವರ ಒಡೆ ಕಾರರಿಗೂ ಮಹಿಳೆಯರು ನಮಸ್ಕರಿಸಿದರು.

ಸುಗ್ಗಿ ಉತ್ಸವದ ಕೊನೆ ದಿನವಾದ ಸೋಮವಾರ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ ೪ ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸಾಂಪ್ರದಾಯಿಕ ಆಚರಣೆ ನಡೆಸಲಾಯಿತು. ಭಕ್ತಾದಿಗಳು ತೆಂಗಿನ ಕಾಯಿ ಒಡೆಯುವ ಮೂಲಕ ತಮ್ಮ ಹರಕೆ ತೀರಿಸಿದರು.

ಬಿಲ್ಲ ರಂಗದಲ್ಲಿ ಪೂರ್ವಜರ ಜೀವನ ಪದ್ದತಿಯನ್ನು ಬಿಂಬಿಸುವ ನೃತ್ಯ ಪ್ರಾಕಾರ, ಕಡವೆ ಬೇಟೆಯಾಡುವ ಪ್ರಸಂಗವನ್ನು ನಟನೆಯ ಮೂಲಕ ತೋರಿಸಲಾಯಿತು. ಕಡವೆಯ ಪಾತ್ರಧಾರಿಯನ್ನು ಅಟ್ಟಿಸಿಕೊಂಡು ಹೋಗುವ ಬೇಟೆಗಾರರ ತಂಡದ ಸದಸ್ಯರಿಗೆ ಕಡವೆ ಒದೆಯುವ ದೃಶ್ಯ ರಂಜಿಸಿತು. ಒದೆ ತಿಂದವರು ನೆಲಕು ್ಕರುಳಿದ ಘಟನೆಯೂ ನಡೆಯಿತು. ಕೊನೆಯಲ್ಲಿ ಕಡವೆ ಕಾಡು ಸೇರುವ ಮೂಲಕ, ಬೇಟೆಗಾರರಿಂದ ಬಚಾವಾಗುವ ದೃಶ್ಯವನ್ನು ಗ್ರಾಮಸ್ಥರು ನಟನೆಯ ಮೂಲಕ ತೋರಿಸಿರು. ಸಾಂಪ್ರದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ಗ್ರಾಮದ ಹಿರಿಯರು, ಬಿಲ್ಲರಂಗದಲ್ಲಿ ಪ್ರದಕ್ಷಿಣೆ ಹಾಕುತ್ತ, ಕೂತಿನಾಡು ಸುಗ್ಗಿಯ ಇತಿಹಾಸವನ್ನು ನೆರೆದಿದ್ದವರಿಗೆ ತಿಳಿಸುತ್ತಿದ್ದರು.

ಗ್ರಾಮದ ಸುಭೀಕ್ಷೆಗೆ, ಮಳೆ, ಬೆಳೆ ಸಮೃದ್ಧಿಗಾಗಿ ಗ್ರಾಮಸ್ಥರು ಸಾಮೂಹಿಕ ಪೂಜೆ ಸಲ್ಲಿಸಿದರು. ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಟಿ.ಜೋಯಪ್ಪ, ಉಪಾಧ್ಯಕ್ಷ ಎನ್.ಕೆ.ಪ್ರಕಾಶ್, ಕಾರ್ಯದರ್ಶಿ ಎನ್.ಬಿ.ರಾಘವೇಂದ್ರ, ಖಜಾಂಚಿ ಎಲ್.ಪಿ.ಈರಪ್ಪ, ಸಹಕಾರ್ಯದರ್ಶಿ ಗೋಪಾಲ್ ಉತ್ಸವದ ನೇತೃತ್ವ ವಹಿಸಿದ್ದರು.

ಕೂತಿನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಷ್ಟೇ ಅಲ್ಲದೇ ನೆರೆಯ ಹಾಸನ ಜಿಲ್ಲೆಯಿಂದಲೂ ಭಕ್ತಾದಿಗಳು ಆಗಮಿಸಿ ಶ್ರೀ ಸಬ್ಬಮ್ಮ ದೇವಿಗೆ ಪೂಜೆ ನೆರವೇರಿಸಿದರು.